ಪರ್ತ್: ಟೆಸ್ಟ್ ಕ್ರಿಕೆಟ್‌ನಲ್ಲೇ ಹೈವೋಲ್ಟೇಜ್ ಸರಣಿಯಾಗಿ ಗುರುತಿಸಿಕೊಂಡಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿ ಇದೇ ಶುಕ್ರವಾರ (ನ.22)ದಿಂದ ಆರಂಭವಾಗುತ್ತಿದೆ. ನ.22ರಿಂದ 2025ರ ಜನವರಿ 7ರ ವರೆಗೆ ಒಟ್ಟು 5 ಪಂದ್ಯಗಳ ಸರಣಿ ನಡೆಯಲಿದೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮೊದಲ ಟೆಸ್ಟ್ ಪಂದ್ಯವನ್ನು ಮುನ್ನಡೆಸಲಿದ್ದಾರೆ.
Advertisement
ಮೊದಲ ಟೆಸ್ಟ್‌ಗೂ ಮುನ್ನ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ನಾನು ರೋಹಿತ್ (Rohit Sharma) ಅವರೊಂದಿಗೆ ಮಾತನಾಡಿದ್ದೇನೆ. ಆಸ್ಟ್ರೇಲಿಯಾಗೆ ಬರುವವರೆಗೂ ಕ್ಯಾಪ್ಟನ್ ಆಗುವ ಬಗ್ಗೆ ನನಗೆ ಸ್ಪಷ್ಟತೆ ಇರಲಿಲ್ಲ. ಇಲ್ಲಿಗೆ ಬಂದ ನಂತರ ಕೋಚ್ ಗೌತಮ್ ಗಂಭೀರ್ ಹಾಗೂ ಆಡಳಿತ ಮಂಡಳಿಯಿಂದ ಸ್ಪಷ್ಟತೆ ಸಿಕ್ಕಿತು. ಈಗಾಗಲೇ ಆಡುವ 11ರ ಬಳಗ (ಪ್ಲೇಯಿಂಗ್- XI) ಅಂತಿಮಗೊಳಿಸಲಾಗಿದೆ. ಆದರೂ ಶುಕ್ರವಾರ ಬೆಳಗ್ಗೆ ಟಾಸ್ ಮುಗಿದ ಬಳಿಕವೇ ಬಹಿರಂಗಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಸ್ಟಾರ್ ವೇಗಿ ಮೊಹಮ್ಮದ್ ಶಮಿ (Mohammed Shami) ಸಹ ಸರಣಿ ಸೇರಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಶಮಿ ಅವರು ಈ ಟೆಸ್ಟ್ ಸರಣಿಯ ವೇಳೆಗೆ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಆದ್ರೆ ಎಷ್ಟನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ
Advertisement
ಶಮಿ ಮತ್ತೆ ಕ್ರಿಕೆಟ್ ಆಡಲು ಶುರು ಮಾಡಿದ್ದಾರೆ. ಖಂಡಿತವಾಗಿಯೂ ಅವರು ತಂಡದ ಆಂತರಿಕ ಭಾಗವಾಗಿದ್ದಾರೆ. ಆಡಳಿತ ಮಂಡಳಿ ಅವರ ಮೇ ಒಂದು ಕಣ್ಣಿಟ್ಟಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶಮಿ ಇಲ್ಲಿ ಆಡುವುದನ್ನು ನೀವು ನೋಡುತ್ತೀರಿ ಎಂದು ಬುಮ್ರಾ ಹೇಳಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್ ಟೈಸನ್ – ಜೇಕ್ ಪಾಲ್ ವಿರುದ್ಧ ಸೋಲು
ಇನ್ನು ಭಾರತ ತಂಡದ ಬೌಲಿಂಗ್ ಕೋಚ್ ಆಗಿರುವ ಮಾರ್ನೆ ಮಾರ್ಕೆಲ್ ಅವರು ಇತ್ತೀಚೆಗೆ ನ್ಯೂಜಿಲೆಂಡ್ ಸರಣಿ ವೇಳೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯಲ್ಲಿ ತರಬೇತಿ ಪಡೆಯುತ್ತಿದ್ದ ಶಮಿ ಅವರನ್ನು ಹತ್ತಿರದಿಂದ ವೀಕ್ಷಿಸಿದ್ದರು. ಜೊತೆಗೆ ಅವರ ಪ್ರಗತಿಯನ್ನು ತಂಡದ ಮ್ಯಾನೇಜ್ಮೆಂಟ್ ಹತ್ತಿರದಿಂದ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸರಣಿ ಗೆದ್ದುಕೊಂಡಿತ್ತು. ಆ ಬಳಿಕ ನಡೆದ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸೀಸ್ ವಿರುದ್ಧವೇ ಸೋತಿತ್ತು.
ಶಮಿಗೆ ಏನಾಗಿತ್ತು?
2023ರ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೊಹಮ್ಮದ್ ಶಮಿ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಶಮಿ ಬೆಂಗಳೂರಿನ ಎನ್‌ಸಿಎನಲ್ಲಿ ತರಬೇತಿಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಬಂಗಾಳ ಪರವಾಗಿ ರಣಜಿ ಪಂದ್ಯವನ್ನಾಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ 156 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 2ನೇ ಅಥವಾ 3ನೇ ಪಂದ್ಯದ ವೇಳೆಗಾದರೂ ಅವರು ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ.