ಬೆಳಗಾವಿ: ಜಾರಕಿಹೊಳಿ ಸಹೋದರರ ಹಿರಿಯ ಸಹೋದರಿ (Jarakiholi Brothers Sister) ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಗೋಕಾಕ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಗಮವ್ವ ನಿಂಗಪ್ಪ ಸುಲಧಾಳ (67) ನಿಧನರಾಗಿದ್ದಾರೆ. ಇವರು ಗೋಕಾಕ್ ನಗರಸಭೆಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಲಗಮವ್ವ ಸುಲಧಾಳ ಅಗಲಿದ್ದಾರೆ.
ಕೆಲವೇ ಹೊತ್ತಿನಲ್ಲಿ ಗೋಕಾಕ್ (Gokak) ನಗರದ ಕುಂಬಾರ ಗಲ್ಲಿಯ ರುದ್ರಭೂಮಿಯಲ್ಲಿ ಲಗಮವ್ವ ಅವರ ಅಂತ್ಯಕ್ರಿಯೆ ನಡೆಯಲಿದೆ. ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಸಹೋದರಿಯ ಅಂತ್ಯಕ್ರಿಯೆಗೆ ಸತೀಶ್ ಜಾರಕಿಹೊಳಿ (Satish Jarakiholi) ಗೈರಾಗಲಿದ್ದಾರೆ. ಇದನ್ನೂ ಓದಿ: ಹೆಂಡ್ತಿ, ಮಕ್ಕಳನ್ನು ನೋಡಲು ಅಮೆರಿಕಾಗೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಸಹೋದರಿ ಅಕಾಲಿಕ ನಿಧನಕ್ಕೆ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳತೆ, ಸೌಜನ್ಯತೆಯ ಆಗರವಾಗಿದ್ದ ಸಹೋದರಿ ಬಾಲ್ಯದಿಂದಲೂ ಪ್ರೋತ್ಸಾಹಿಸಿ ಮುನ್ನಡೆಸಿದ್ದಾರೆ. ಅವರ ಮಾರ್ಗದರ್ಶನ ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸಿದೆ. ತನ್ನ ತಾಯಿ ಸ್ವರೂಪಳಾಗಿದ್ದ ಸಹೋದರಿ ಕಳೆದುಕೊಂಡು ತೀವ್ರ ಆಘಾತವಾಗಿದೆ ಎಂದು ಸತೀಶ್ ಸಂತಾಪ ಸೂಚಿಸಿದ್ದಾರೆ.