ವಿಜಯಪುರ: ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಇವತ್ತು ಕೋರ್ಟ್‍ಗೆ ದಾಖಲೆ ನೀಡುತ್ತೇನೆ ಅಂತಾ ಮಾಜಿ ಸಚಿವ ಜನಾರ್ದನ ರೆಡ್ಡಿ ವಿಜಯಪುರದ ಕೋಲ್ಹಾರದಲ್ಲಿ ಹೇಳಿದ್ದಾರೆ.
ನಾನು ಮಾಡಿರುವ ಆರೋಪದ ಬಗ್ಗೆ ದಾಖಲೆಯನ್ನು ಕೋರ್ಟ್‍ಗೆ ನೀಡುತ್ತೇನೆ. ನನ್ನ ಬಳಿ ದಾಖಲೆ ಇಲ್ಲ ಅಂತಾ ಹೇಳುವ ಕುಮಾರಸ್ವಾಮಿಗೆ ಹಣದ ಮದವೇರಿದೆ ಎಂದು ಹರಿಹಾಯ್ದರು. ನಾನು ನ್ಯಾಯವಾಗಿ ನಡೆದುಕೊಂಡಿದ್ದು, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ. ಆದ್ರೂ ದೈವೀ ಇಚ್ಛೆಯಿಂದ ಎಲ್ಲದರಿಂದ ಪಾರಾಗಿದ್ದೇನೆ. ಕುಮಾರಸ್ವಾಮಿ ಮಾಡುವ ಆರೋಪಗಳ ಬಗ್ಗೆ ನಾನು ಹೇಳಿಕೆ ನೀಡುವುದಿಲ್ಲ ಅಂತಾ ಸ್ಪಷ್ಟಪಡಿಸಿದರು.
ತಮ್ಮ ಮುಂದಿನ ನಡೆ ಬಗ್ಗೆ ಹೇಳಿಕೆ ನೀಡಿದ ರೆಡ್ಡಿ, ನಾನು ಬಿಜೆಪಿಯ ಕಾರ್ಯಕರ್ತನಾಗಿ ಮುಂದುವರೆಯಲಿದ್ದೇನೆ. ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಹೈಕಮಾಂಡ್ ನಿರ್ಧಾರದಂತೆ ಕಾರ್ಯ ನಿರ್ವಹಿಸಲಿದ್ದೇನೆ ಎಂದರು. ಇನ್ನು ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿಎಸ್‍ವೈ ಅಧಿಕಾರಕ್ಕೆ ಬರುವುದು ನಿಶ್ಚಿತ ಅಂದ್ರು.
ಇವತ್ತು ಸಂಜೆಯೊಳಗೆ ಎಸ್‍ಐಟಿಗೆ 150 ಕೋಟಿ ರುಪಾಯಿ ಹಗರಣದ ಸಿಡಿಯನ್ನ ರೆಡ್ಡಿ ನೀಡಲಿದ್ದಾರೆ ಅಂತ ಹೇಳಲಾಗಿದೆ.