Connect with us

Karnataka

ಜಂತಕಲ್ ಮೈನಿಂಗ್ ಅಕ್ರಮದಲ್ಲಿ ಕುಮಾರಸ್ವಾಮಿ ಪಾತ್ರ ಇದೆ: ಸುಪ್ರೀಂಗೆ ಎಸ್‍ಐಟಿ

Published

on

ನವದೆಹಲಿ: ಕಾಂಗ್ರೆಸ್, ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್‍ಗೆ ಭರ್ಜರಿ ಸಿದ್ಧತೆ ನಡೆಸಿದ್ದರೆ, ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ ಸಾರಥಿಗೆ ಕಂಟಕ ಎದುರಾಗಿದೆ. ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಸುಪ್ರೀಂ ಕೋರ್ಟ್ ಗೆ ಎಸ್‍ಐಟಿ ಮಧ್ಯಂತರ ವರದಿ ಸಲ್ಲಿಸಿದೆ.

150 ಕೋಟಿ ರೂಪಾಯಿ ಕಿಕ್‍ಬ್ಯಾಕ್ ಪಡೆದಿರುವ ಆರೋಪದಲ್ಲಿ ಕುಮಾರಸ್ವಾಮಿ ಪಾತ್ರ ಇದೆ ಅಂತ ವರದಿಯಲ್ಲಿ ಎಸ್‍ಐಟಿ ಉಲ್ಲೇಖಿಸಿದೆ. ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಬಂಧನದ ಬಳಿಕ ಕೊಟ್ಟಿರುವ ಮಾಹಿತಿ, ಅವರ ಬಳಿಯಿದ್ದ ಡೈರಿಯಲ್ಲಿ ವಿನೋದ್ ಗೋಯಲ್, ಎನ್‍ಕೌಂಟರ್ ಸ್ಪೆಷಲಿಸ್ಟ್ ದಯಾನಂದ್ ಭೇಟಿ ಹಾಗೂ ಎಚ್‍ಡಿ ಕುಮಾರಸ್ವಾಮಿ ಅವರನ್ನು ಮಾತನಾಡಿಸಿರುವ ವಿಷಯ ಡೈರಿಯಲ್ಲಿ ನಮೂದಾಗಿರೋದಾಗಿ ತಿಳಿದು ಬಂದಿದೆ.

ವರದಿಯಲ್ಲಿ ಏನಿದೆ?:
ಜಂತಕಲ್ ಕೇಸ್‍ನಲ್ಲಿ ಕುಮಾರಸ್ವಾಮಿ ವಿರುದ್ಧ ಸಾಕ್ಷ್ಯಗಳು ಸಿಕ್ಕಿದೆ. ಕಳೆದ ವಾರ ವಿನೋದ್ ಗೋಯಲ್ ಅವರನ್ನು ಸಾಕ್ಷಿಗೆ ಒದಗಿಸಿದ್ದಾರೆ. ಗಂಗರಾಮ್ ಪುತ್ರ ಗಗನ್ ಬಡೇರಿಯಾ ಬಗ್ಗೆಯೂ ಕೂಡಾ ಸಾಕ್ಷಿಯಿದೆ. ಸಾಕ್ಷಿ ಸಿಕ್ಕಿದ ಬಳಿಕ ಮಧ್ಯಂತರ ವರದಿ ಸಲ್ಲಿಕೆ ಮಾಡುತ್ತಿದ್ದೇವೆ. 3 ತಿಂಗಳ ಒಳಗೆ ಸಂಪೂರ್ಣ ವರದಿ ಸಾಧ್ಯವಿಲ್ಲ, ಹಾಗಾಗಿ  ಪ್ರಕರಣವನ್ನ ಶೀಘ್ರವಾಗಿ ಇತ್ಯರ್ಥ ಮಾಡಲು ಕಷ್ಟ ಇರುವ ಕಾರಣ ತನಿಖೆಯ ಅವಧಿಯನ್ನು ವಿಸ್ತರಿಸಬೇಕೆಂದು ಎಸ್‍ಐಟಿ ಕೇಳಿಕೊಂಡಿದೆ.

ಏನಿದು ಜಂತಕಲ್ ಮೈನಿಂಗ್ ಕೇಸ್?
ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.

ಎಚ್‍ಡಿಕೆಯ ಮೇಲಿರುವ ಆರೋಪ ಏನು?
ಹಿಂದೆ ಕಂಪೆನಿಯು ಸಂಗ್ರಹಿಸಿದ್ದ ಅದಿರು ಸಾಗಣೆಕೆಯ ಲೈಸೆನ್ಸ್ ನವೀಕರಣಕ್ಕೆ ಎನ್‍ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ 3 ಬಾರಿ ಹೆಚ್‍ಡಿಕೆಯನ್ನು ಭೇಟಿ ಮಾಡಿದ್ದಾರೆ. ಇದಾದ ಬಳಿಕ ಗಂಗಾರಾಮ್ ಬಡೇರಿಯಾಗೆ ಲೈಸೆನ್ಸ್ ನವೀಕರಣಕ್ಕೆ ಎಚ್‍ಡಿಕೆ ಸೂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಎಸ್‍ಐಟಿಯಲ್ಲಿರುವ ಸಾಕ್ಷ್ಯಗಳು ಏನು?
ಕೇಂದ್ರದ ಗಣಿ ಮತ್ತು ಪರಿಸರ ಸಚಿವಾಲಯ 2009ರ ಡಿ.1 ಮತ್ತು ಡಿ.24ರಂದು ಆದಿರು ಸಾಗಾಣಿಕೆಗೆ ಸಂಬಂಧಿಸಿದಂತೆ ಜಂತಕಲ್ ಮೈನಿಂಗ್ ಕಂಪೆನಿ ಅಥವಾ ಯಾವುದೇ ಇಲಾಖೆಯ ಜೊತೆ ಪತ್ರ ವ್ಯವಹಾರ ನಡೆಸಿಲ್ಲ ಎಂದು ಪತ್ರ ಬರೆದಿತ್ತು. ಈ ಅಂಶವನ್ನು ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರು. ಈ ಪತ್ರದ ಸಾಕ್ಷ್ಯವನ್ನು ಇಟ್ಟುಕೊಂಡು ಎಸ್‍ಐಟಿ ಕೇಂದ್ರವೇ ಅನುಮತಿ ನೀಡದೇ ಇರುವಾಗ ಈ ಕಂಪೆನಿ ಆದಿರು ಸಾಗಾಟ ಮಾಡಲು ಅನುಮತಿ ಸಿಕ್ಕಿದ್ದು ಹೇಗೆ ಎಂದು ತನಿಖೆ ನಡೆಸಲು ಮುಂದಾಗಿದೆ.

ಎಫ್‍ಐಆರ್‍ನಲ್ಲಿ ಯಾರ ಹೆಸರಿದೆ?
ಎಸ್‍ಐಟಿ ಹೊಸದಾಗಿ ದಾಖಲಿಸಿರೋ ಎಫ್‍ಐಆರ್‍ನಲ್ಲಿ 1. ಎಸ್.ಎಂ ಕೃಷ್ಣ, 2. ಎನ್ ಧರ್ಮಸಿಂಗ್, 3. ಹೆಚ್.ಡಿ. ಕುಮಾರಸ್ವಾಮಿ, 4. ಡಾ.ಬಸಪ್ಪ ರೆಡ್ಡಿ, 5. ಗಂಗಾರಮ್ ಬಡೇರಿಯಾ (ಐಎಎಸ್), 6. ವಿ.ಉಮೇಶ್ (ಐಎಎಸ್), 7. ಐ.ಆರ್. ಪೆರುಮಾಳ್ (ಐಎಎಸ್), 8. ಕೆ.ಎಸ್ ಮಂಜುನಾಥ್ (ಐಎಎಸ್), 9. ಡಿ.ಎಸ್. ಅಶ್ವಥ್ (ಐಎಎಸ್), 10. ಜೀಜಾ ಮಾಧವನ್ ಹರಿಸಿಂಗ್ (ಐಪಿಎಸ್), 11. ಮಹೇಂದ್ರ ಜೈನ್ (ಐಎಎಸ್), 12. ಕೆ. ಶ್ರೀನಿವಾಸ್, 13. ಎಂ ರಾಮಪ್ಪ ಹಾಗೂ 14. ಶಂಕರ ಲಿಂಗಯ್ಯ.

ಕೃಷ್ಣ ವಿರುದ್ಧ ತನಿಖೆ ನಡೆಯಲ್ಲ:
ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ. ಯಾಕಂದ್ರೆ ಈಗಾಗಲೇ ಸುಪ್ರೀಂ ಕೋರ್ಟ್ ಕೃಷ್ಣ ಅವರ ವಿರುದ್ಧ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೂ ಮತ್ತೊಮ್ಮೆ ಎಫ್‍ಐಆರ್ ದಾಖಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಎಸ್.ಎಂ. ಕೃಷ್ಣ ಅವರ ಯಾವುದೇ ಪ್ರಕರಣವನ್ನು ವಿಚಾರಣೆ ಮಾಡಲ್ಲ ಎಂದು ಎಸ್‍ಐಟಿ ಎಸ್ಪಿ ಮಂಜುನಾಥ್ ಅಣ್ಣಗೇರಿ ಪತ್ರ ಬರೆದಿದ್ದಾರೆ.

ಸುಪ್ರೀಂ ಸೂಚನೆ ಮೇರೆಗೆ ತನಿಖೆ: ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ, ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‍ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು.

 

https://youtu.be/qYR4BTahwrM

Click to comment

Leave a Reply

Your email address will not be published. Required fields are marked *