ಜಂತಕಲ್ ಅಕ್ರಮ ಮೈನಿಂಗ್ ಕೇಸ್: ಎಚ್‍ಡಿಕೆ ಜಾಮೀನು ಅರ್ಜಿ ವಜಾ

Public TV
4 Min Read
H D Kumaraswamy Jantakal Mining Case

ಬೆಂಗಳೂರು: ಜಂತಕಲ್ ಅಕ್ರಮ ಮೈನಿಂಗ್ ಕೇಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಜಾಮೀನು ಅರ್ಜಿಯನ್ನು ಲೋಕಯುಕ್ತ ಕೋರ್ಟ್ ತಿರಸ್ಕೃತಗೊಳಿಸಿದೆ.

ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ಮಾತನಾಡಿದ ಎಚ್‍ಡಿಕೆ, ಜಾಮೀನು ಅರ್ಜಿ ವಜಾ ಆಗಿದ್ದಕ್ಕೆ ನಾನು ಗಾಬರಿ ಆಗಿಲ್ಲ. ನನ್ನ ಪರ ನ್ಯಾಯ ಸಿಗುವ ವಿಶ್ವಾಸ ನನಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯ ನಡೆಸುತ್ತಿದೆ ಎಂದು ದೂಷಿಸಿದರು.

ನ್ಯಾಯಾಲಯವನ್ನು ದಾರಿ ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಆದರೆ ಇದಕ್ಕೆಲ್ಲ ನಾನು ಗಾಬರಿ ಆಗುವುದಿಲ್ಲ. ನನ್ನ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ನಾಯಕರು ಕಷ್ಟ ಪಡುತ್ತಿದ್ದು, ಈ ಕುತಂತ್ರಗಳಿಗೆ ನಾನು ಹೆದರುವುದಿಲ್ಲ ಎಂದು ಎಚ್‍ಡಿಕೆ ಹೇಳಿದರು.

ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೊಗಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದು, ಹೈಕೋರ್ಟ್‍ನಲ್ಲಿ ಜಾಮೀನು ಸಿಗುವ ತನಕ ಎಸ್‍ಐಟಿ ಮುಂದೆ ವಿಚಾರಣೆ ಹಾಜರಾಗದಿರಲು ಕುಮಾರಸ್ವಾಮಿ ನಿರ್ಧಾರಿಸಿದ್ದಾರೆ ಎನ್ನಲಾಗಿದೆ.

ಸಾಕ್ಷ್ಯ ಹೇಳಿದ ರೆಡ್ಡಿ: ಎಚ್‍ಡಿಕೆ ವಿರುದ್ಧ 150 ಕೋಟಿ ರೂಪಾಯಿ ಗಣಿಕಪ್ಪ ಆರೋಪ ಹೊರಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಮಂಗಳವಾರ ಹೆಬ್ಬಾಳ ಬಳಿ ಇರುವ ಎಸ್‍ಐಟಿ ಮುಂದೆ ಹಾಜರಾಗಿ ಸಾಕ್ಷ್ಯ ಹೇಳಿದ್ದಾರೆ. ಮೊದಲ ಬಾರಿ ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದ ವೇಳೆ ಮೂರು ವಾರಗಳ ಸಮಯವನ್ನು ಜನಾರ್ದನ ರೆಡ್ಡಿ ಕೇಳಿದ್ದರು. ಮೂರು ವಾರದ ಒಳಗಡೆ ಸಾಕ್ಷ್ಯ ಹೇಳದ ಹಿನ್ನೆಲೆಯಲ್ಲಿ ಎಸ್‍ಐಟಿ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಜಾರಿಯಾದ ಬಳಿಕ ಜೂನ್ 13 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದರು.

ಏನಿದು ಜಂತಕಲ್ ಮೈನಿಂಗ್ ಕೇಸ್?
ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.

ಎಚ್‍ಡಿಕೆಯ ಮೇಲಿರುವ ಆರೋಪ ಏನು?
ಹಿಂದೆ ಕಂಪೆನಿಯು ಸಂಗ್ರಹಿಸಿದ್ದ ಅದಿರು ಸಾಗಣೆಕೆಯ ಲೈಸೆನ್ಸ್ ನವೀಕರಣಕ್ಕೆ ಎನ್‍ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ 3 ಬಾರಿ ಹೆಚ್‍ಡಿಕೆಯನ್ನು ಭೇಟಿ ಮಾಡಿದ್ದಾರೆ. ಇದಾದ ಬಳಿಕ ಗಂಗಾರಾಮ್ ಬಡೇರಿಯಾಗೆ ಲೈಸೆನ್ಸ್ ನವೀಕರಣಕ್ಕೆ ಎಚ್‍ಡಿಕೆ ಸೂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಎಸ್‍ಐಟಿಯಲ್ಲಿರುವ ಸಾಕ್ಷ್ಯಗಳು ಏನು?
ಕೇಂದ್ರದ ಗಣಿ ಮತ್ತು ಪರಿಸರ ಸಚಿವಾಲಯ 2009ರ ಡಿ.1 ಮತ್ತು ಡಿ.24ರಂದು ಆದಿರು ಸಾಗಾಣಿಕೆಗೆ ಸಂಬಂಧಿಸಿದಂತೆ ಜಂತಕಲ್ ಮೈನಿಂಗ್ ಕಂಪೆನಿ ಅಥವಾ ಯಾವುದೇ ಇಲಾಖೆಯ ಜೊತೆ ಪತ್ರ ವ್ಯವಹಾರ ನಡೆಸಿಲ್ಲ ಎಂದು ಪತ್ರ ಬರೆದಿತ್ತು. ಈ ಅಂಶವನ್ನು ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರು. ಈ ಪತ್ರದ ಸಾಕ್ಷ್ಯವನ್ನು ಇಟ್ಟುಕೊಂಡು ಎಸ್‍ಐಟಿ ಕೇಂದ್ರವೇ ಅನುಮತಿ ನೀಡದೇ ಇರುವಾಗ ಈ ಕಂಪೆನಿ ಆದಿರು ಸಾಗಾಟ ಮಾಡಲು ಅನುಮತಿ ಸಿಕ್ಕಿದ್ದು ಹೇಗೆ ಎಂದು ತನಿಖೆ ನಡೆಸಲು ಮುಂದಾಗಿದೆ.

ನೋಟಿಸ್ ನೀಡಲು ಮುಂದಾಗಿದ್ದು ಯಾಕೆ?
ಹೆಚ್‍ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಜಂತಕಲ್ ಮೈನಿಂಗ್‍ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಸಿಎಂ ಕಚೇರಿಯಿಂದ ಒತ್ತಡ ಬಂದಿತ್ತು ಎಂದು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಎಸ್‍ಐಟಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ. ಬಡೇರಿಯಾ ಹೇಳಿಕೆ ಹಿನ್ನೆಲೆಯಲ್ಲಿ ಹೆಚ್‍ಡಿ ಕುಮಾರಸ್ವಾಮಿಗೆ ನೋಟಿಸ್ ನೀಡಲು ಎಸ್‍ಐಟಿ ಸಜ್ಜಾಗಿತ್ತು.

ಎಫ್‍ಐಆರ್‍ನಲ್ಲಿ ಯಾರ ಹೆಸರಿದೆ?
ಎಸ್‍ಐಟಿ ಹೊಸದಾಗಿ ದಾಖಲಿಸಿರೋ ಎಫ್‍ಐಆರ್ನಲ್ಲಿ 1. ಎಸ್.ಎಂ ಕೃಷ್ಣ, 2. ಎನ್ ಧರ್ಮಸಿಂಗ್, 3. ಹೆಚ್.ಡಿ. ಕುಮಾರಸ್ವಾಮಿ, 4. ಡಾ.ಬಸಪ್ಪ ರೆಡ್ಡಿ, 5. ಗಂಗಾರಮ್ ಬಡೇರಿಯಾ (ಐಎಎಸ್), 6. ವಿ.ಉಮೇಶ್ (ಐಎಎಸ್), 7. ಐ.ಆರ್. ಪೆರುಮಾಳ್ (ಐಎಎಸ್), 8. ಕೆ.ಎಸ್ ಮಂಜುನಾಥ್ (ಐಎಎಸ್), 9. ಡಿ.ಎಸ್. ಅಶ್ವಥ್ (ಐಎಎಸ್), 10. ಜೀಜಾ ಮಾಧವನ್ ಹರಿಸಿಂಗ್ (ಐಪಿಎಸ್), 11. ಮಹೇಂದ್ರ ಜೈನ್ (ಐಎಎಸ್), 12. ಕೆ. ಶ್ರೀನಿವಾಸ್, 13. ಎಂ ರಾಮಪ್ಪ ಹಾಗೂ 14. ಶಂಕರ ಲಿಂಗಯ್ಯ.

ಕೃಷ್ಣ ವಿರುದ್ಧ ತನಿಖೆ ನಡೆಯಲ್ಲ:
ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ. ಯಾಕಂದ್ರೆ ಈಗಾಗಲೇ ಸುಪ್ರೀಂ ಕೋರ್ಟ್ ಕೃಷ್ಣ ಅವರ ವಿರುದ್ಧ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೂ ಮತ್ತೊಮ್ಮೆ ಎಫ್‍ಐಆರ್ ದಾಖಲಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಎಸ್.ಎಂ. ಕೃಷ್ಣ ಅವರ ಯಾವುದೇ ಪ್ರಕರಣವನ್ನು ವಿಚಾರಣೆ ಮಾಡಲ್ಲ ಎಂದು ಎಸ್‍ಐಟಿ ಎಸ್ಪಿ ಮಂಜುನಾಥ್ ಅಣ್ಣಗೇರಿ ಪತ್ರ ಬರೆದಿದ್ದಾರೆ.

ಸುಪ್ರೀಂ ಸೂಚನೆ ಮೇರೆಗೆ ತನಿಖೆ: ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆಯವರ ವರದಿಯಲ್ಲಿದ್ದ ಹಲವಾರು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಇನ್ನಿತರರ ವಿರುದ್ಧ ದೂರು ಸಲ್ಲಿಸಿದ್ದರು. ಅಪಾರ ಪ್ರಮಾಣದ ಅರಣ್ಯಭೂಮಿಯನ್ನು ಕಬಳಿಸಿ ಅಕ್ರಮ ಗಣಿಗಾರಿಕೆ ನಡೆಸಲು ಎಚ್.ಡಿ.ಕುಮಾರಸ್ವಾಮಿ, ಎನ್.ಧರಂಸಿಂಗ್, ಎಸ್.ಎಂ.ಕೃಷ್ಣ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎಚ್.ಡಿ.ಕುಮಾರಸ್ವಾಮಿ ಹಾಗೂ ಎನ್.ಧರಂಸಿಂಗ್ ವಿರುದ್ಧ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್‍ನ ವಿಶೇಷ ತನಿಖಾ ತಂಡಕ್ಕೆ ಸೂಚಿಸಿತ್ತು.

janthakal

Share This Article
Leave a Comment

Leave a Reply

Your email address will not be published. Required fields are marked *