ಮೈಸೂರು: ಲೋಕಸಭಾ ಕ್ಷೇತ್ರದಲ್ಲಿ ಜನತಾ ಪರಿವಾರ ಅಥವಾ ಈಗಿನ ಜೆಡಿಎಸ್ ಒಮ್ಮೆಯೂ ಗೆಲುವಿನ ನಗೆ ಬೀರಿಯೆ ಇಲ್ಲ. ಜನತಾ ಪರಿವಾರದ ಘಟಾನುಘಟಿ ನಾಯಕರು ಮೈಸೂರಿನವರೆ (Mysuru Lok Sabha) ಆದರೂ ಕೂಡ ಜನತಾ ಪರಿವಾರಕ್ಕೆ ಇಲ್ಲಿ ಗೆಲವು ಮರೀಚಿಕೆಯೆ ಆಗಿದೆ.

1989 ರ ಲೋಕಸಭಾ ಚುನಾವಣೆ ವೇಳೆಗೆ ಜನತಾಪಕ್ಷ ಇಬ್ಭಾಗವಾಗಿತ್ತು. ಜನತಾದಳದಿಂದ ಪ. ಮಲ್ಲೇಶ್ ಹಾಗೂ ಸಮಾಜವಾದಿ ಜನತಾ ಪಕ್ಷದಿಂದ ಡಿ. ಮಾದೇಗೌಡ ಸ್ಪರ್ಧಿಸಿ, ಸೋತರು. 1991 ರಲ್ಲಿ ಮತ್ತೆ ಡಿ. ಮಾದೇಗೌಡ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡರು.
1996 ರಲ್ಲಿ ಜಿ.ಟಿ.ದೇವೇಗೌಡ ಜನತಾದಳ ಅಭ್ಯರ್ಥಿಯಾಗಿ 11,676 ಮತಗಳ ಅಂತರದಿಂದ ಸೋತರು. 1998 ರಲ್ಲಿ ಜಿ.ಟಿ.ದೇವೇಗೌಡ ಮತ್ತೆ ಜನತಾದಳದ ಅಭ್ಯರ್ಥಿ. ಆದರೆ ಮೂರನೇ ಸ್ಥಾನಕ್ಕೆ ಹೋದರು. 1999 ರಲ್ಲಿ ಬಿ.ಎಸ್. ಮರಿಲಿಂಗಯ್ಯ ಜೆಡಿಎಸ್ ಅಭ್ಯರ್ಥಿಯಾಗಿ ಹೀನಾಯವಾಗಿ ಸೋತರು. 2004 ರಲ್ಲಿ ಮಾಜಿ ಶಾಸಕ ಎ.ಎಸ್. ಗುರುಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ 10,150 ಮತಗಳ ಅಂತರದಿಂದ ಸೋತರು. ಇದನ್ನೂ ಓದಿ: ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!
2009 ರಲ್ಲಿ ಬಿ.ಎ. ಜೀವಿಜಯ, 2014 ರಲ್ಲಿ ನ್ಯಾ. ಚಂದ್ರಶೇಖರಯ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಒಟ್ಟಾರೆ 1996 ಹಾಗೂ 2004 ರಲ್ಲಿ ಜನತಾದಳ ಅಲೆ ಇದ್ದಿದ್ದರಿಂದ ಜನತಾ ಪರಿವಾರದ ಅಭ್ಯಥಿಗಳು ಗೆಲುವಿನ ಸಮೀಪ ಬಂದಿದ್ದರು, ಆದರೆ ಗೆಲ್ಲಲಾಗಲಿಲ್ಲ. ಸಿದ್ದರಾಮಯ್ಯ, ವಿ. ಶ್ರೀನಿವಾಸಪ್ರಸಾದ್, ಡಾ.ಹೆಚ್.ಸಿ. ಮಹದೇವಪ್ಪ, ಹೆಚ್.ಎಸ್. ಮಹದೇವಪ್ರಸಾದ್ ಅವರಂಥ ಘಟಾನುಘಟಿ ನಾಯಕರು ಪಕ್ಷದಲ್ಲಿ ಇದ್ದಾಗಲೇ ಜನತಾ ಪರಿವಾರ ಗೆದ್ದಿಲ್ಲ ಎಂಬುದು ವಿಶೇಷ.


