ನವದೆಹಲಿ: ಗಣಿಗಾರಿಕೆ ಚಟುವಟಿಕೆಗಳನ್ನು ಪುನಾರಂಭಿಸಲು ಅನುಮತಿ ಕೋರಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರಂ ಗಣಿ ಕಂಪನಿ(ಓಎಂಸಿ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ತಮ್ಮ ಕಂಪನಿಗೆ ಅವಕಾಶ ನೀಡುವಂತೆ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದಾರೆ.
Advertisement
ಗಣಿಗಾರಿಕೆ ನಿಲ್ಲಿಸಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ವಿವಾದ ಕಾರಣವಾಗಿತ್ತು. ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿದಿದ್ದು, ಅನುಮತಿ ತಡೆಹಿಡಿಯಲು ಕಾರಣಗಳಿಲ್ಲ. ಹೀಗಾಗಿ ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ನೀಡಬೇಕು ಎಂದು ಓಎಂಸಿ ಮನವಿ ಮಾಡಿದೆ.
Advertisement
Advertisement
ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಆಂಧ್ರಪ್ರದೇಶ ಸರ್ಕಾರ, ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಿದೆ. ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ನಡುವೆ ಗಡಿ ರೇಖೆಯನ್ನು ಗುರುತಿಸಿದೆ. ಇದನ್ನು ಎರಡು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದು ಯಾವುದೇ ತಕರಾರು ಇಲ್ಲ ಎಂದು ಹೇಳಿದೆ.
Advertisement
ಪ್ರಕರಣದ ವಿಚಾರಣೆಯನ್ನು ನಾಳೆ ಸುಪ್ರೀಂಕೋರ್ಟ್ ನಡೆಸಲಿದ್ದು, ಆಂಧ್ರಪ್ರದೇಶ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹನ್ನೊಂದು ವರ್ಷಗಳ ಬಳಿಕ ಮತ್ತೆ ರೆಡ್ಡಿ ಸಹೋದರರಿಗೆ ಗಣಿಗಾರಿಕೆಗೆ ಅವಕಾಶ ಸಿಗುತ್ತಾ ಎಂಬ ಕುತೂಹಲ ಎದ್ದಿದೆ.
ಅಕ್ರಮ ಗಣಿಗಾರಿಕೆ ಹಿನ್ನಲೆ ಬಂಧನಕ್ಕೆ ಒಳಗಾಗಿದ್ದ ಜನಾರ್ದನ ರೆಡ್ಡಿ ಜೈಲು ಶಿಕ್ಷೆ ಅನುಭವಿಸಿದ್ದರು. ಸದ್ಯ ವಿದೇಶಗಳಲ್ಲಿ ಹಣ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಬಿಐ ತನಿಖೆಗೆ ಎದುರಿಸುತ್ತಿದ್ದಾರೆ.