– ಸಿಎಂ-ಡಿಕೆಶಿ ನಡುವೆ ಒಪ್ಪಂದ ಆಗಿದ್ದು ಸತ್ಯ, ಸಂಕ್ರಮಣದ ನಂತರ ತೀರ್ಮಾನ
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕಿಂದು (ಡಿ.29) ಭೇಟಿ ನೀಡಿದ ಶಾಸಕ ಜನಾರ್ದನ ರೆಡ್ಡಿ (Janardhana Reddy) ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
ಗೇಟ್ ಅಳವಡಿಕೆ ಕಾರ್ಯಾಚರಣೆ ಪರಿಶೀಲಿಸಿದ ನಂತರ ಸ್ಥಳದಲ್ಲಿದ್ದ ತಜ್ಞರೊಂದಿಗೆ ಕಾರ್ಯಾಚರಣೆಯ ಮಾಹಿತಿ ಪಡೆದರು. ಗೇಟ್ ಅಳವಡಿಕೆ ಮಾಡಲು ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.ಇದನ್ನೂ ಓದಿ: ಟಿಬಿ ಡ್ಯಾಂ ಗೇಟ್ ಬದಲಿಸುವ ಕಾರ್ಯ ಆರಂಭ – ಆಳಕ್ಕೆ ಇಳಿದು, ಜೋತಾಡಿ ಗೇಟ್ ತೆರವು
ನಂತರ ಮಾತನಾಡಿದ ಅವರು, ಈಗಾಗಲೇ ತುಂಗಭದ್ರಾ ಜಲಾಶಯದ (Tungabhadra Dam) ಗೇಟ್ ಅಳವಡಿಕೆ ಕಾರ್ಯಾಚರಣೆ ನಡೆದಿದೆ. ಸದ್ಯ ಮೊದಲನೆಯದಾಗಿ 18ನೇ ನಂಬರ್ ಗೇಟ್‌ನ್ನು ಅಳವಡಿಕೆ ಮಾಡುತ್ತಿದ್ದಾರೆ. ಮುಂದಿನ 4 ದಿನದಲ್ಲಿ ಅದನ್ನು ಪೂರ್ಣಗೊಳಿಸಿ, ಅದರಲ್ಲಿ ಏನಾದರೂ ಲೋಪ ದೋಷ ಕಂಡು ಬಂದಲ್ಲಿ, ಎಲ್ಲವನ್ನು ಸರಿಪಡಿಸುತ್ತಾರೆ. ಬಳಿಕ 33 ಗೇಟ್ ಅಳವಡಿಕೆಗೆ ಮೂರು ತಂಡಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸುತ್ತಾರೆ. ಏಪ್ರಿಲ್ ಅಂತ್ಯಕ್ಕೆ ತುಂಗಭದ್ರಾ ಡ್ಯಾಂನ 33 ಗೇಟ್ ಅಳವಡಿಕೆ ಮಾಡುವ ಕಾರ್ಯ ಪೂರ್ಣಗೊಳ್ಳುತ್ತದೆ. ಹೆಚ್ಚು, ಕಡಿಮೆ ಏನಿದ್ದರೂ ಎಲ್ಲವನ್ನು ಸರಿಪಡಿಸಿಕೊಂಡು ಮುಂದಿನ ಮಳೆಗಾಲದ ಹೊತ್ತಿಗೆ ಎಲ್ಲ ಗೇಟ್‌ಗಳ ಕಾರ್ಯ ಪೂರ್ಣಗೊಳ್ಳುತ್ತದೆ. ಗೇಟ್ ಅಳವಡಿಕೆ ಕಾರ್ಯಕ್ಕೆ ಆಂಧ್ರ ಹಾಗೂ ತೆಲಂಗಾಣದಿಂದ 20 ಕೋಟಿ ರೂ., ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಪರಿಹಾರ ನೀಡಿ:
ಡ್ಯಾಂನಲ್ಲಿ ನೀರಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡನೇ ಬೆಳೆಗೆ ನೀರು ಬಿಟ್ಟಿಲ್ಲ. ಇದರಿಂದ ಪರಿಹಾರ ನೀಡಬೇಕು. ಪ್ರತಿ ಎಕರೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಸರ್ಕಾರ ಪರಿಶೀಲಿಸುವುದಾಗಿ ಹೇಳಿದೆ. ಬಿಜೆಪಿಯಿಂದ ಪರಿಹಾರಕ್ಕೆ ಒತ್ತಾಯಿಸಲಾಗುವುದು. ಡ್ಯಾಂನಿಂದ ಎರಡನೇ ಬೆಳೆಗೆ ನೀರು ನೀಡಿಲ್ಲ. ಈ ಹಿನ್ನೆಲೆ ಗೇಟ್ ಅಳವಡಿಕೆ ವೇಳೆಯೇ ಕಾಲುವೆ ದುರಸ್ತಿ ಆಗಬೇಕು ಎಂದರು.
ಸಿಎಂ-ಡಿಕೆಶಿ ನಡುವೆ ಒಪ್ಪಂದ ಆಗಿದೆ:
ಇದೇ ವೇಳೆ ಸಿಎಂ-ಡಿಸಿಎಂ ಬಗ್ಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದು ಸತ್ಯ. ಸಿದ್ದರಾಮಯ್ಯ ಮಾತು ಕೊಟ್ಟರೆ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಇದೆ. ನಾನು ಸಂಡೂರು ಉಪಚುನಾವಣೆಯಿಂದ ಈವರೆಗೆ ಇದೇ ಮಾತು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ 50: 50 ಅನುಪಾತದಲ್ಲಿ ಅಧಿಕಾರ ಹಂಚಿಕೆಯಾಗಿದೆ. ಇಬ್ಬರಿಗೂ ಸಮಾನ ಅವಧಿಗೆ ಅಧಿಕಾರ ಹಂಚಿಕೆ ಆಗಬೇಕು ಎಂದು ಕಾಂಗ್ರೆಸ್ ಹೈಕಮಾಂಡ ತೀರ್ಮಾನ ಮಾಡಿದೆ. ಸಂಕ್ರಮಣದ ನಂತರ ಒಳ್ಳೆ ದಿನ, ಒಳ್ಳೆ ಮೂಹೂರ್ತ ನೋಡಿಕೊಂಡು ತೀರ್ಮಾನ ಮಾಡಬಹುದು. ಅದು ಅವರ ಪಕ್ಷದ ವಿಚಾರ ಎಂದು ತಿಳಿಸಿದರು.ಇದನ್ನೂ ಓದಿ: ಸುಪ್ರೀಂ ಸಮಿತಿಯಿಂದ ಗಡಿ ಒತ್ತುವರಿ ವರದಿ ಸಲ್ಲಿಕೆ – ರೆಡ್ಡಿಗೆ ಮತ್ತೆ ಸಂಕಷ್ಟ



