ಬಳ್ಳಾರಿ: ಜಿಲ್ಲೆಯಲ್ಲಿ ಬ್ಯಾನರ್ ಹಾಗೂ ವಾಲ್ಮೀಕ ಪುತ್ಥಳಿಗೆ ಸಂಬಂಧ ನಡೆದ ಗಲಾಟೆ ವಿಚಾರವಾಗಿ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಸೇರಿ ಹಲವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಶುಕ್ರವಾರ (ಜ.2) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸಮ್ಮುಖದಲ್ಲಿ ಗಂಗಾವತಿ (Gangavathi) ಶಾಸಕ ಜನಾರ್ದನ ರೆಡ್ಡಿ (Janardhana Reddy) ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜನಾರ್ದನ ರೆಡ್ಡಿ ಅವರು ಹಲ್ಲೆ ಹಾಗೂ ಕೊಲೆ ಯತ್ನ ಆರೋಪದ ಮೇಲೆ ಹಾಗೂ ಬಿಜೆಪಿ ಕಾರ್ಯಕರ್ತ ನಾಗರಾಜ್ ಅವರು ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪ ಮೇಲೆ ದೂರು ನೀಡಿದ್ದರು. ಇದನ್ನೂ ಓದಿ: Ballari Clash | ಘಟನಾ ಸ್ಥಳದಲ್ಲಿ ಇರದಿದ್ದಕ್ಕೆ ಎಸ್ಪಿ ಸಸ್ಪೆಂಡ್ ಮಾಡಿದ್ದೇನೆ – ಸಿಎಂ ಸಮರ್ಥನೆ
ಸ್ವತಃ ಎಎಸ್‌ಪಿ ರವಿಕುಮಾರ್ ಹಾಗೂ ಬ್ರೂಸ್‌ಪೇಟೆ ಠಾಣೆ ಪೊಲೀಸರು ಜನಾರ್ದನ ರೆಡ್ಡಿ ಮನೆಗೆ ಬಂದು ದೂರು ಸ್ವೀಕರಿಸಿದ್ದರು. ದೂರಿನನ್ವಯ ಶಾಸಕ ನಾರಾ ಭರತ್, ಸತೀಶ್ ರೆಡ್ಡಿ, ಚಾನಾಳ್ ಶೇಖರ್, ನಾರಾ ಪ್ರತಾಪ್ ರೆಡ್ಡಿ ಹಾಗೂ ನಾರಾ ಸೂರ್ಯನಾರಾಯರೆಡ್ಡಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈಗಾಗಲೇ ಈ ಸಂಬಂಧ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಅಲಿಖಾನ್, ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲನ್ನ, ದಿವಾಕರ್ ಹಾಗೂ ಮಾರುತಿ ಪ್ರಸಾದ್ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಬಳ್ಳಾರಿಯ ಹವಂಬಾವಿ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್ ಅಳವಡಿಕೆ ಮಾಡಲು ಗುರುವಾರ (ಜ.1) ಒಂದು ಗುಂಪು ಮುಂದಾಗಿತ್ತು. ಈ ವೇಳೆ ಗಲಾಟೆ ಪ್ರಾರಂಭವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದರು. ಉದ್ವಿಗ್ನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಬಂದಿದ್ದರು. ಈ ಸಂದರ್ಭದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದರು.
ಪೊಲೀಸರು ಲಾಠಿ ಚಾರ್ಜ್ ಮಾಡಿದರೂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್ ಮಾಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಇನ್ನೂ ಭರತ್ ರೆಡ್ಡಿ ಬೆಂಬಲಿಗ ಸತೀಶ ರೆಡ್ಡಿಗೆ ಗಂಭೀರ ಗಾಯಗೊಂಡಿದ್ದರು. ಗಲಾಟೆ ವಿಕೋಪದ ಬಳಿಕ ಪೊಲೀಸರು ರೆಡ್ಡಿ ಮನೆಯ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.ಇದನ್ನೂ ಓದಿ: ಅಟ್ರಾಸಿಟಿ ಸೇರಿದಂತೆ ರೆಡ್ಡಿ ಮೇಲೆ 4 ಕೇಸ್ – ಎಲ್ಲದರಲ್ಲೂ A1 ಆರೋಪಿ

