ವಿಶೇಷ ವಿಡಿಯೋ ಮೂಲಕ ಪತ್ನಿಗೆ ಮಹಿಳಾ ದಿನಾಚರಣೆ ವಿಶ್ ಮಾಡಿದ್ರು ಜನಾರ್ದನ ರೆಡ್ಡಿ

Public TV
2 Min Read
bly reddy dance

ಬಳ್ಳಾರಿ: ವಿಶೇಷ ವಿಡಿಯೊವೊಂದನ್ನು ತಮ್ಮ ಪ್ರೀತಿಯ ಪತ್ನಿಗೆ ಡೆಡಿಕೇಟ್ ಮಾಡುವ ಮೂಲಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ವಿಭಿನ್ನವಾಗಿ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯವನ್ನು ಕೋರಿದ್ದಾರೆ.

ತಮ್ಮ 25ನೇ ವರ್ಷದ ಮದುವೆ ವಾರ್ಷಿಕೋತ್ಸವದ ದಿನದಂದು ಪತ್ನಿ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಮೈಯನ್ನು ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು. ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು. ಸಮಸ್ತ ಮಹಿಳಾ ಕುಲಕ್ಕೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಒಂದು ವಿಶೇಷ ಸಂದೇಶವನ್ನು ಬರೆದು ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಹಾಗೂ ಎಲ್ಲಾ ಮಹಿಳೆಯರಿಗೂ ಜನಾರ್ದನ ರೆಡ್ಡಿ ಅವರು ಪ್ರೀತಿಯಿಂದ ವಿಶ್ ಮಾಡಿದ್ದಾರೆ.

bly reddy dance 1

ಪೋಸ್ಟ್ ನಲ್ಲಿ ಏನಿದೆ?
ಕನ್ನಡದ ವರನಟ ಡಾ.ರಾಜ್ ಕುಮಾರ್ ಹಾಡಿರುವ ಈ ಸುಮಧುರ ಗೀತೆ ಮಹಿಳೆಯ ತ್ಯಾಗ, ಸಹನೆ ಮತ್ತು ವಾತ್ಸಲ್ಯ ಭರಿತ ಹೃದಯಕ್ಕೆ ಪೂರಕವಾಗಿದ್ದು, ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸ್ಮರಿಸಲು ಸಂತೋಷವೆನಿಸುತ್ತಿದೆ. ಈ ವಿಶ್ವ ಮಹಿಳಾ ದಿನಾಚರಣೆ ವೇಳೆ ಮಹಿಳೆಯರ ಕುರಿತು ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಮಹಿಳೆಯ ಹೃದಯ ಆಗಸದಷ್ಟು ವಿಶಾಲ, ಮನಸ್ಸು ಸಾಗರದಷ್ಟೇ ಸಮಾನ. ಮಹಿಳೆ ನಿಜಕ್ಕೂ ಅನಂತ ಸೃಷ್ಟಿಗೆ ಕಾರಣಳು. ಆದಿಶಕ್ತಿಯಾಗಿ ಎಲ್ಲೆಡೆ ವ್ಯಾಪಿಸಿರುವ ಮಹಿಳೆ ನಿಜಕ್ಕೂ ಈ ಜಗತ್ತಿನ ಅದ್ಭುತವಾದ ಕೊಡುಗೆ. ಪುರಾಣ, ಇತಿಹಾಸದಲ್ಲೂ ಮಹಿಳೆ ಎಂದಿಗೂ ಅಗ್ರ ಸ್ಥಾನದಲ್ಲಿದ್ದಾಳೆ. ಈಶ್ವರನಿಗೆ ಅರ್ಧಾಂಗಿಯಾಗಿ, ವಿಷ್ಣುವಿನಲ್ಲಿ ಅನುರಕ್ತಳಾಗಿ, ಬ್ರಹ್ಮನಿಗೆ ಸರಸ್ವತಿಯಾಗಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಮೂಲ ಕಾರಣಳಾಗಿದ್ದಾಳೆ. ಶಕ್ತಿ ದೇವತೆಯಾದ ಮಹಿಳೆ ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರಗಳಿಗೆ ಸ್ಫೂರ್ತಿದಾಯಕಳು. ಇಂತಹ ಮಹಿಳೆಯ ಬಗ್ಗೆ ಇಡೀ ಜಗತ್ತೇ ಇಂದು ವಿಶ್ವ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಗೌರವ ಸಲ್ಲಿಸುತ್ತಿದೆ.

bly janardhan reddy

ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದ ಅನುಮತಿ ಪಡೆದು ನನ್ನ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಾನು ಬಳ್ಳಾರಿಗೆ ಆಗಮಿಸಿದಾಗ ಸರಳ ಕಾರ್ಯಕ್ರಮದಲ್ಲಿ ನನ್ನ ಪತ್ನಿಗಾಗಿ ನಾನು ಸಮರ್ಪಿಸಿ ಧ್ವನಿಗೂಡಿಸಿದ ಆ ಹಾಡನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇನೆ. ನನ್ನೆಲ್ಲ ನೋವು, ನಲಿವು, ಕಷ್ಟ, ನಷ್ಟಗಳು, ಸುಖ, ಸಂತೋಷ ಹೀಗೆ ನಾನಾ ರೀತಿಯ ಸಂದರ್ಭಗಳಲ್ಲಿ ಭಾಗಿಯಾಗಿ ಎಲ್ಲ ಸಮಯದಲ್ಲೂ ನನಗೆ ಪ್ರೋತ್ಸಾಹ ನೀಡುತ್ತಾ, ನನ್ನ ಶ್ರೇಯಸ್ಸನ್ನೇ ಬಯಸುತ್ತಾ, ಮಕ್ಕಳ ಪಾಲನೆ ಮಾತ್ರವಲ್ಲದೆ ನನ್ನನ್ನು ನಂಬಿದ ನೂರಾರು ಕುಟುಂಬಗಳ ಸದಸ್ಯರಿಗೆ ತಾಯಿಯ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸಿದ ನನ್ನ ಪತ್ನಿ ಶ್ರೀಮತಿ ಲಕ್ಷ್ಮಿಅರುಣಾ ಗೆ ಈ ಶುಭ ಸಂದರ್ಭದಲ್ಲಿ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ. ಮತ್ತೊಮ್ಮೆ ವಿಶ್ವ ಮಹಿಳಾ ದಿನಾಚರಣೆ ಶುಭ ಸಂದರ್ಭದಲ್ಲಿ ಸಮಸ್ತ ಮಹಿಳೆಯರಿಗೆ ನನ್ನ ಹಾರ್ದಿಕ ಶುಭಾಶಯಗಳು ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು ಈವರೆಗೆ ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 400ಕ್ಕೂ ಹೆಚ್ಚು ಶೇರ್ ಆಗಿದೆ.

https://www.facebook.com/galijanardhanreddy/videos/570411313445283/

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *