ಕೊಪ್ಪಳ: ಜಿಲ್ಲೆಯಲ್ಲಿ ತಂಗಡಗಿ ವರ್ಸಸ್ ರೆಡ್ಡಿ ಟಾಕ್‍ಫೈಟ್ ಮತ್ತೆ ಜೋರಾಗಿದೆ. ಕಾಂಗ್ರೆಸ್ ಅಧಿನಾಯಕಿಯಿಂದಲೇ ಏನೂ ಮಾಡೋಕೆ ಆಗಲಿಲ್ಲ. ನೀನೇನು ಮಾಡ್ತೀಯಾ..? ಎನ್ನುವ ಮೂಲಕ ಸಚಿವ ಶಿವರಾಜ್ ತಂಗಡಗಿಗೆ (Shivaraj Tangadagi) ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಟಾಂಗ್ ಕೊಟ್ಟಿದ್ದಾರೆ.
ಕುಷ್ಟಗಿ ತಾಲೂಕಿನ ಹಮಸಾಗರದಲ್ಲಿ ಮಾತನಾಡುತ್ತಾ ಜನಾರ್ದನ ರೆಡ್ಡಿ ಬೆತ್ತಲೆ ಮಾಡ್ತೀನಿ ಎಂಬ ತಂಗಡಗಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ತಂಗಡಗಿ ನಿನ್ನ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಕೈಯಲ್ಲಿ ನನ್ನ ಏನೂ ಮಾಡಿಕೊಳ್ಳಲು ಆಗಿಲ್ಲ. ಅಧಿಕಾರಕ್ಕೆ ಬರೋಕೆ ಆಗ್ತಿಲ್ಲ ಅಂತ ನನ್ನ 4 ವರ್ಷ ಜೈಲಲ್ಲಿಟ್ಟು ಅಧಿಕಾರಕ್ಕೆ ಬಂದಿದ್ದೀರಿ. ನಾಚಿಕೆಯಾಗಬೇಕು ನಿಮಗೆ. ಈಗ ಬನ್ನಿ ಅಧಿಕಾರಕ್ಕೆ, ಹೇಗೆ ಬರ್ತಿರೋ ನಾನು ನೋಡ್ತೀನಿ ಎಂದು ಕಿಡಿಕಾರಿದರು.
ನಮ್ಮ ಕರ್ಮ ಫಲ ನಮ್ಮ ಜೊತೆ ಇರುತ್ತೆ, ನಾವು ಏನೇ ಮಾಡಿದ್ರು ಅದು ನಮ್ಮ ಜೊತೆ ಬರುತ್ತೆ. ಒಳ್ಳೆಯದು ಮಾಡಿದ್ರೆ ಒಳ್ಳೆಯದಾಗತ್ತೆ, ಕೆಟ್ಟದ್ದು ಮಾಡಿದ್ರೆ ಕೆಟ್ಟದಾಗುತ್ತೆ. 10 ವರ್ಷದಲ್ಲಿ ದೇಶದಲ್ಲಿ ಕೊಳ್ಳೆ ಹೊಡೆದು ಲೂಟಿ ಮಾಡಿದ್ದೀರಿ, ಜನಾರ್ದನ ರೆಡ್ಡಿನ ಜೈಲಿಗೆ ಹಾಕಿದ್ರಿ, ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ, ತಮಿಳುನಾಡಲ್ಲಿ ಕನಿಮೋಳಿ, ಅಮಿತ್ ಶಾರನ್ನ ಜೈಲಿಗೆ ಹಾಕಿದ್ರಿ. ನಿಮಗೆ ನಾಚಿಕೆ ಇಲ್ಲ, ಅಧಿಕಾರಕ್ಕಾಗಿ 25-30 ಕುಟುಂಬಗಳನ್ನ ಜೈಲಿಗೆ ಹಾಕಿ ನೀವು ಬೆತ್ತಲಾಗಿದ್ದೀರಿ. ಇವತ್ತು ಬೆತ್ತಲೆ ಮಾಡ್ತೀವಿ ಅಂತ ಹೇಳುವ ತಂಗಡಗಿ, ಡಿಕೆಶಿ ತಿಹಾರ್ ಜೈಲಿಗೆ ಹೋಗುವಾಗ ಎಲ್ಲಿಗೆ ಹೋಗಿದ್ರಿ ಎಂದು ರೆಡ್ಡಿ ಪ್ರಶ್ನಿಸಿದರು. ಇದನ್ನೂ ಓದಿ: ಬರ ಪರಿಹಾರ; ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ: ಕೃಷ್ಣ ಬೈರೇಗೌಡ
ಮೋದಿ ಅಂದ್ರೆ ಶಿವರಾಜ ತಂಗಡಗಿಗೆ ಕಿವಿಯಲ್ಲಿ ಮುಳ್ಳು ಚುಚ್ಚಿದಂತೆ ಆಗುತ್ತೆ. ಮೋದಿ ಮೋದಿ ಅಂದೋರಿಗೆ ಕಪಾಳಕ್ಕೆ ಹೊಡಿರಿ ಅಂತಾರೆ ಅಂದ್ರೆ ಎಷ್ಟು ತಲೆ ಕೆಟ್ಟಿರಬೇಕು ಇವರಿಗೆ. ಸಂಸ್ಕಾರ ಇಲ್ಲದ ಕಾಂಗ್ರೆಸ್ ಪಕ್ಷದ ಮಂತ್ರಿ ತಂಗಡಗಿ ಕಪಾಳಕ್ಕೆ ಹೊಡಿಬೇಕು ಅಂದ್ರೆ ನಮಗೆ ಒಂದು ಸೆಕೆಂಡ್ ಕೂಡಾ ಟೈಮ್ ಬೇಕಾಗಿಲ್ಲ. ಆದರೆ ಅದು ಬಿಜೆಪಿ ಸಂಸ್ಕಾರ ಸಂಸ್ಕೃತಿ ಅಲ್ಲ. ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಾಗ ಎರಡು ಬಾರಿ ಮನಸಲ್ಲಿ ಮೋದಿ ಮೋದಿ ಎಂದು ಮತ ಹಾಕಿ. ಆಗ ತಂಗಡಗಿಯ ಎರಡು ಕೆನ್ನೆಗೆ ಬಾರಿಸಿದಂತಾಗತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.