ನವದೆಹಲಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಪಾಕಿಸ್ತಾನ ಸೇರಿದಂತೆ ಕಾಶ್ಮೀರ ರಾಜಕೀಯ ನಾಯಕರು ಕಿಡಿಕಾರಿದ್ದಾರೆ.
ನಿನ್ನೆಯಿಂದಲೇ ಜಮ್ಮು ಕಾಶ್ಮೀರದ ರಾಜಕೀಯ ನಾಯಕರನ್ನು ಮುನ್ನೆಚರಿಕಾ ಕ್ರಮವಾಗಿ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಆದರೆ ಇಂದು ಸದನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ ರದ್ದು ಪಡಿಸುವ ಪ್ರಸ್ತಾವನೆಯನ್ನು ಮುಂದಿಡುತ್ತಿದಂತೆ ಸಾಮಾಜಿಕ ಜಾಲತಾಣದ ಮೂಲಕ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರು ಆಕ್ರೋಶ ಹೊರ ಹಾಕಿದ್ದರು. ಸದ್ಯ ಅಶಾಂತಿಯನ್ನ ಸೃಷ್ಟಿಸುತ್ತಿರುವ ಯತ್ನ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ತಾತ್ಕಾಲಿಕವಾಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಿ ನಿಷೇಧಾಜ್ಞೆ ಹೇರಲಾಗಿದೆ. ಅಲ್ಲದೇ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ.
Advertisement
Advertisement
ಇತ್ತ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಮುಖಭಂಗ ಅನುಭವಿಸಿದರೂ ಪಾಕ್ ತನ್ನ ಹಳೆಯ ಧೋರಣೆ, ಹಳೆಯ ಚಾಳಿಯನ್ನು ಮುಂದುವರಿಸಿದೆ. ಜಮ್ಮು ಕಾಶ್ಮೀರ ವಿಭಜನೆಯಲ್ಲಿ ಯಾವುದೇ ಸಂಬಂಧ ಇಲ್ಲದಿದ್ದರೂ ಕೂಡ ಭಾರತ ಸರ್ಕಾರ ಕೈಗೊಂಡ ಕ್ರಮದ ವಿರುದ್ಧ ಪಾಕ್ ಕೆಂಡ ಕಾರಿದೆ. ಕಾಶ್ಮೀರ ಒಂದು ಅಂತಾಷ್ಟ್ರೀಯ ವಿವಾದವಾಗಿದ್ದು, ಕಾಶ್ಮೀರದ ವಿಚಾರದಲ್ಲಿ ಮಧ್ಯಪ್ರವೇಶಿಸಲು ತಮಗೂ ಹಕ್ಕಿದೆ. ಭಾರತ ಸರ್ಕಾರ ಕೈಗೊಂಡ ನಿರ್ಣಯವನ್ನು ನಾವು ಒಪ್ಪಲ್ಲ. ಕಾಶ್ಮೀರಿಗಳ ಹಿತ ಕಾಪಾಡಲು ಪಾಕಿಸ್ತಾನ ಸದಾ ಮುಂದಿರುತ್ತದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಅಲ್ಲದೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಕಾಶ್ಮೀರ ವಿವಾದಿತ ಸ್ಥಾನವೆಂದು ಮಾನ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಂಟಿ ಸಂಸತ್ತು ಅಧಿವೇಶನ ಕರೆಯಲಾಗಿದೆ ಎಂದು ಪಾಕಿಸ್ತಾನ ನಾಯಕರು ಹೇಳಿದ್ದಾರೆ.