ಶ್ರೀನಗರ: ತನ್ನ ಪ್ರೀತಿಯ ಶ್ವಾನವನ್ನು ಕಾಪಾಡಲು ಹೋಗಿ ಆರ್ಮಿ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಜಮ್ಮ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗುಲ್ಮಾರ್ಗ್ ಪ್ರದೇಶದಲ್ಲಿ ನಡೆದಿದೆ.
ಮೇಜರ್ ಅಂಕಿತ್ ಬುಧರಾಜಾ ಪ್ರಾಣ ಕಳೆದುಕೊಂಡ ಅಧಿಕಾರಿ. ಶನಿವಾರ ರಾತ್ರಿ ಅಕಸ್ಮಿಕವಾಗಿ ಅಂಕಿತ್ ಅವರ ಮನೆಗೆ ಬೆಂಕಿ ಬಿದ್ದಿದೆ. ಈ ವೇಳೆ ಮನೆಯ ಒಳಗೆ ಇದ್ದ ನಾಯಿಯನ್ನು ರಕ್ಷಿಸಲು ಹೋಗಿ ಅಂಕಿತ್ ಪ್ರಾಣ ಬಿಟ್ಟಿದ್ದಾರೆ.
ಅಂಕಿತ್ ಅವರು ಇದ್ದ ಮನೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಅಂಕಿತ್ ತನ್ನ ಪತ್ನಿ ಮತ್ತು ಒಂದು ನಾಯಿಯನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮನೆಯ ಪೂರ್ತಿ ಬೆಂಕಿ ಹೊತ್ತಿಕೊಂಡಾಗ ಮನೆಯೊಳಗೆ ಇನ್ನೊಂದು ನಾಯಿ ಇದ್ದದ್ದು ನೆನಪಿಗೆ ಬಂದಿದೆ. ಆಗ ಅದನ್ನು ರಕ್ಷಿಸಲು ಅಂಕಿತ್ ಮತ್ತೆ ಮನೆಯೊಳಗೆ ಹೋಗಿದ್ದಾರೆ. ಆದರೆ ಹೊರಬರುವಷ್ಟರಲ್ಲಿ ಶೇ.90 ರಷ್ಟು ಸುಟ್ಟುಹೋಗಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಯ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಮೃತ ಅಂಕಿತ್ ಬುಧರಾಜಾ ಅವರ ಪಾರ್ಥಿವ ಶರೀರವನ್ನು ಟ್ಯಾಂಗ್‍ಮಾರ್ಗ್‍ನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.