ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

Public TV
1 Min Read
army

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಜಂಟಿ ಕಾರ್ಯಚರಣೆ ವೇಳೆ ನಡೆದ ಎನ್‍ಕೌಂಟರ್ ನಲ್ಲಿ ಹಿಜ್ಬುಲ್‍ನ ಓರ್ವ ಉಗ್ರನನ್ನು ಸದೆಬಡಿಯಲಾಗಿದೆ.

ಆವಂತಿಪುರದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಎನ್‍ಕೌಂಟರ್ ಮಾಡಲಾಗಿದೆ. ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕು ಎಂದು ಗುರುತಿಸಲಾಗಿದೆ.

ಪುಲ್ವಾಮಾದ ಶರ್ಸಾಲಿ ಗ್ರಾಮದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಸುತ್ತಮುತ್ತಲಿನ 12ರಿಂದ 15 ಮನೆಗಳ ಜನರನ್ನು ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲಾಗಿದ್ದು, ಉಗ್ರನನ್ನು ಸದೆಬಡಿದ ಸ್ಥಳದಲ್ಲಿ ಒಂದು ಎಕೆ-56 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.

ಇಂದು ಮುಂಜಾನೆ ವೇಳೆಗೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನಾಪಡೆ ಕೂಡ ಪ್ರತಿದಾಳಿ ನಡೆಸಿದೆ. ಈ ವೇಳೆ ಗುಂಡೇಟಿಗೆ ಉಗ್ರ ಸಾವನ್ನಪ್ಪಿದ್ದಾನೆ.

2 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಿಂದ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಭಾನುವಾರ ಹಂದ್ವಾರದಲ್ಲಿ ನಡೆದ ದಾಳಿಯಲ್ಲಿ ಐವರು ಭದ್ರತಾ ಪಡೆಯ ಸಿಬ್ಬಂದಿ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು.

Share This Article