Connect with us

Latest

ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ: ಐರೋಪ್ಯ ಒಕ್ಕೂಟ ಘೋಷಣೆ

Published

on

– 370ನೇ ವಿಧಿ ರದ್ದು ಭಾರತದ ಆಂತರಿಕ ವಿಚಾರ

ಶ್ರೀನಗರ: ಜಮ್ಮು-ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಐರೋಪ್ಯ ಒಕ್ಕೂಟ ನಿಯೋಗ ಘೋಷಿಸಿದೆ.

ಕಾಶ್ಮೀರದಲ್ಲಿನ ಪರಿಸ್ಥಿತಿ ಪರಾಮರ್ಶೆಗೆಂದು ಭಾರತಕ್ಕೆ ಬಂದಿರುವ ಐರೋಪ್ಯ ಒಕ್ಕೂಟದ 23 ಜನ ಸಂಸದರ ನಿಯೋಗವು ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಹಲವು ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿತ್ತು. ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಿಯೋಗವು ಇಂದು ಸುದ್ದಿಗೋಷ್ಠಿ ನಡೆಸಿ, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದು ಮಾಡಿರುವುದು ಭಾರತದ ಆಂತರಿಕ ವಿಚಾರ. ಈ ಬಗ್ಗೆ ನಾವು ಮಾತನಾಡುವುದಿಲ್ಲ. ಭಯೋತ್ಪಾದನೆ ಜಾಗತಿಕ ಅಪಾಯವಾಗಿದ್ದು, ಅದರ ವಿರುದ್ಧ ಹೋರಾಡುವಲ್ಲಿ ನಾವು ಭಾರತದೊಂದಿಗೆ ನಿಲ್ಲಬೇಕಿದೆ ಎಂದು ತಿಳಿಸಿದೆ.

ಮುಗ್ಧ ಕಾರ್ಮಿಕರನ್ನು ಭಯೋತ್ಪಾದಕರು ಹತ್ಯೆಗೈದಿರುವುದು ದುರದೃಷ್ಟಕರ ಸಂಗತಿ. ಇದನ್ನು ನಾವು ಖಂಡಿಸುತ್ತೇವೆ ಎಂದು ಐರೋಪ್ಯ ಒಕ್ಕೂಟ ನಿಯೋಗವು ಕಾಶ್ಮೀರದಲ್ಲಿ ಪಶ್ಚಿಮ ಬಂಗಾಳದ ಆರು ಜನ ಕಾರ್ಮಿಕರ ಹತ್ಯೆಯನ್ನು ವಿರೋಧಿಸಿದೆ.

ಇದೇ ವೇಳೆ ಮಾತನಾಡಿದ ಐರೋಪ್ಯ ಒಕ್ಕೂಟ ಸಂಸದ ಹೆನ್ರಿ ಮೊಲೋಸ್ಸೆ, ಕಾಶ್ಮೀರವು ಭಾರತದ ಅತ್ಯಂತ ಕ್ರಿಯಾತ್ಮಕ ಪ್ರದೇಶಗಳಲ್ಲಿ ಒಂದಾಗಲು ಎಲ್ಲಾ ಅಂಶಗಳನ್ನು ಹೊಂದಿದೆ. ಭಾರತವು ಉನ್ನತ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಎಲ್ಲ ಸೌಲಭ್ಯಗಳನ್ನು ಪಡೆದರೂ ಕಾಶ್ಮೀರವು ಪ್ರಗತಿಯಲ್ಲಿ ಹಿಂದುಳಿಯುತ್ತಿದೆ ಎಂದು ತಿಳಿಸಿದ್ದಾರೆ.

ನಿಯೋಗವು ಸೈನ್ಯ, ಪೊಲೀಸರು ಹಾಗೂ ಯುವ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದೆ. ಈ ವೇಳೆ ಶಾಂತಿಯುತ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಹೆನ್ರಿ ಮೊಲೋಸ್ಸೆ ಹೇಳಿದರು.

ನಿಯೋಗದ ಸದಸ್ಯ ನ್ಯೂಟನ್ ಡನ್ ಅವರು ಮಾತನಾಡಿ, ಭಾರತವು ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರವಾಗಿರುವುದನ್ನು ನಾವು ನೋಡಬಯಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ಐರೋಪ್ಯ ಒಕ್ಕೂಟದ ಸಂಸದರ ನಿಯೋಗ ನಡೆಸಿದ ಸುದ್ದಿಗೋಷ್ಠಿಗೆ ಕೆಲವೇ ಕೆಲವು ಪತ್ರಕರ್ತರಿಗೆ ಪ್ರವೇಶ ನೀಡಲಾಗಿತ್ತು. ಕಾಶ್ಮೀರದ ಬಹುತೇಕ ಪ್ರಮುಖ ದಿನಪತ್ರಿಕೆಗಳಿಗೆ ನಿರ್ಬಂಧ ಹೇರಲಾಗಿತ್ತು.

ಮಂಗಳವಾರ ಏನಾಯ್ತು?
ಶ್ರೀನಗರ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದಿಳಿದಿದ್ದ ಸಂಸದರನ್ನು ಗುಂಡು ನಿರೋಧಕ ಎಸ್‍ಯುವಿಗಳಲ್ಲಿ ಶ್ರೀನಗರದ ಸುತ್ತಾಟಕ್ಕೆ ಕರೆದೊಯ್ಯಲಾಗಿತ್ತು. ಶ್ರೀನಗರದ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಎಲ್ಲೆಡೆ ನಾಕಾಬಂದಿ ಹಾಕಲಾಗಿತ್ತು. ಜೊತೆಗೆ ಹಲವೆಡೆ ಸಂಚಾರವನ್ನು ನಿಷೇಧಿಸಲಾಗಿತ್ತು.

ಐರೋಪ್ಯ ಒಕ್ಕೂಟ ನಿಯೋಗದ ಭೇಟಿಯನ್ನು ವಿರೋಧಿಸಿ ಸ್ಥಳೀಯರು ಮಂಗಳವಾರ ಅಘೋಷಿತ ಬಂದ್ ಆಚರಿಸಿದ್ದರು. ಶ್ರೀನಗರದ ಹಲವೆಡೆ ವಿದ್ಯಾರ್ಥಿಗಳು ಮತ್ತು ಯುವಕರು ಗುಂಪುಗೂಡಿ, ಭದ್ರತಾ ಸಿಬ್ಬಂದಿಯತ್ತ ಕಲ್ಲುತೂರಿದ್ದರು. ವಿದೇಶಿ ಸಂಸದರ ಭೇಟಿಯನ್ನು ವಿರೋಧಿಸಿ ವರ್ತಕರು ಅಘೋಷಿತ ಬಂದ್ ಆಚರಿಸಿದ್ದರು. ಹೀಗಾಗಿ ನಗರದ ಬಹುತೇಕ ಅಂಗಡಿಮುಂಗಟ್ಟುಗಳು ಮಂಗಳವಾರ ಬಾಗಿಲು ಮುಚ್ಚಿದ್ದವು.

ಕಾಶ್ಮೀರದ ಸ್ಥಿತಿ ಪರಾಮರ್ಶೆಗೆಂದು ಐರೋಪ್ಯ ಒಕ್ಕೂಟದ 27 ಸಂಸದರು ಸೋಮವಾರವೇ ನವದೆಹಲಿಗೆ ಬಂದಿದ್ದರು. ಅಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ನಿಯೋಗದ ಜೊತೆಗೆ ಸಭೆ ನಡೆಸಿದ್ದರು. ಈ ಪೈಕಿ ನಾಲ್ವರು ಸಂಸದರು ಕಾಶ್ಮೀರಕ್ಕೆ ಭೇಟಿ ನೀಡದೇ, ತಮ್ಮ ದೇಶಗಳಿಗೆ ವಾಪಸ್ ತೆರಳಿದ್ದರು. ಆದರೆ ಅವರು ವಾಪಸ್ ಆದರು ಎನ್ನುವ ವಿಚಾರವಾಗಿ ಸ್ಪಷ್ಟನೆ ಸಿಕ್ಕಿಲ್ಲ.

Click to comment

Leave a Reply

Your email address will not be published. Required fields are marked *