– ಭಾರತದ ನಿರ್ಧಾರ ಸರಿ ಎಂದ ಯುರೋಪಿಯನ್ ಸಂಸತ್
– ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಚಾರ
ನವದೆಹಲಿ: ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು ಎಂದು ವಿಶ್ವಸಂಸ್ಥೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಬುಧವಾರ ಪಾಕಿಸ್ತಾನಿ ಮಾಧ್ಯಮವೊಂದು ಜಮ್ಮು ಕಾಶ್ಮೀರದ ಬಿಕ್ಕಟ್ಟಿನ ಕುರಿತು ಪ್ರಶ್ನಿಸಿದ್ದು, ಇದಕ್ಕೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಉತ್ತರಿಸಿ, ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು. ಅಲ್ಲದೆ, ಭಾರತ ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅಗತ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.
ಕಳೆದವಾರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಭಾರತ ತನ್ನ ನಿಲುವನ್ನು ಪುನರುಚ್ಚರಿಸಿತ್ತು. ಪಾಕಿಸ್ತಾನ ಸುಳ್ಳು ಹಾಗೂ ಉನ್ಮಾದದ ಹೇಳಿಕೆಗಳೊಂದಿಗೆ ಈ ವೇದಿಕೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿತ್ತು.
ನಮ್ಮ ಸಾಮರ್ಥ್ಯವು ಉತ್ತಮ ಆಡಳಿತಕ್ಕೆ ಸಂಬಂಧಿಸಿದೆ. ಉತ್ತಮ ಸಲಹೆಗಳನ್ನು ಸ್ವೀಕರಿಸಿದಾಗ ಮಾತ್ರ ಉತ್ತಮ ಆಡಳಿತವನ್ನು ಕಾರ್ಯಗತಗೊಳಿಸಬಹುದು. ಮತ್ತೊಂದೆಡೆ ವಕಾಲತ್ತು ವಹಿಸುವುದು ಹಾಗೂ ಅದನ್ನು ಕಾಪಾಡಿಕೊಳ್ಳುವುದು ಸಹ ಪ್ರಮುಖ ಅಂಶವಾಗಿದೆ ಎಂದು ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ.
ಭೂಪ್ರದೇಶದಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಬೇಕು. ಭಾರತ ಪಾಕಿಸ್ತಾನದ ನಡುವಿನ ಸಂವಾದವು ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಅಗತ್ಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರ, ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಲು ಪಾಕಿಸ್ತಾನ ನಡೆಸಿದ ಮತ್ತೊಂದು ಪ್ರಯತ್ನದ ಕುರಿತು ಪ್ರಸ್ತಾಪಿಸಲಾಗಿತ್ತು. ಆಗ ಭಾರತ ಪ್ರತಿಕ್ರಿಯಿಸಿ, ಮಾನವ ಹಕ್ಕುಗಳ ಹೆಸರಿನಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಈ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದನ್ನು ನಾವು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿ ಭಾರತ ತಿರುಗೇಟು ನೀಡಿತ್ತು.
ಇತ್ತೀಚೆಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಭವಿಷ್ಯದಲ್ಲಿ ‘ನರಮೇಧ’ ಸಂಭವಿಸುವ ಕುರಿತು ಅಭಿಪ್ರಾಯಪಟ್ಟಿದ್ದರು.
ಖುರೇಷಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಕೆಲವು ಪಾಕಿಸ್ತಾನಿ ನಾಯಕರು ಜಿಹಾದಿಗಳ ಮೊರೆ ಹೋಗಿದ್ದಾರೆ. ‘ನರಮೇಧ’ವನ್ನು ಸೃಷ್ಟಿಸುವ ಸಲುವಾಗಿ ವಾಸ್ತವದಿಂದ ದೂರ ಉಳಿದಿದ್ದಾರೆ ಎಂದು ತಕ್ಕ ಉತ್ತರ ನೀಡಿತ್ತು.
ಆಗಸ್ಟ್ ನಲ್ಲಿ ಭಾರತದ ಜಮ್ಮು ಕಾಶ್ಮೀರಕ್ಕೆ ನಿಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ ತೀವ್ರ ಆತಂಕಕ್ಕೊಳಗಾಗಿದೆ. ಈ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲು ಮುಂದಾಗುತ್ತಿದ್ದು ವಿವಿಧ ದೇಶಗಳ ನೆರವು ಕೇಳುತ್ತಿದೆ.
ಮಂಗಳವಾರ ಯುರೋಪಿಯನ್ ಸಂಸತ್ತಿನ ವಿಶೇಷ ಚರ್ಚೆ ಸಂದರ್ಭದಲ್ಲಿಯೂ ಸಹ ಜಮ್ಮು ಕಾಶ್ಮೀರದ ವಿಚಾರ ಪ್ರಸ್ತಾಪವಾಗಿದ್ದು, ಸಂಸತ್ ಸದಸ್ಯರಾದ ರಿಸ್ಜಾರ್ಡ್ ಜಾರ್ನೆಕಿ ಹಾಗೂ ಫುಲ್ವಿಯೊ ಮಾರ್ಟುಸ್ಸಿಯೆಲ್ಲೊ ಅವರು ಭಾರತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯುವ ಮೂಲಕ ಭಾರತದ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅಲ್ಲದೆ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೋಲೆಂಡ್‍ನ ಯುರೋಪಿಯನ್ ಕನ್ಸರ್ವೇಟಿವ್ ಮತ್ತು ರಿಫಾರ್ಮಿಸ್ಟ್ಸ್ ಗ್ರೂಪ್‍ನ ಸದಸ್ಯ ಜಾರ್ನೆಕಿ ಭಾರತವನ್ನು ‘ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ’ ಎಂದು ಕರೆದಿದ್ದಾರೆ. ಅಲ್ಲದೆ ಭಾರತದ ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳನ್ನು ನಾವು ನೋಡಬೇಕಿದೆ. ಈ ಭಯೋತ್ಪಾದಕರು ಚಂದ್ರ ಲೋಕದಿಂದ ಇಳಿದಿದ್ದಲ್ಲ. ಬದಲಿಗೆ ನೆರೆಯ ದೇಶ ಪಾಕಿಸ್ತಾನದಿಂದ ಬರುತ್ತಿರುವುದು. ಹೀಗಾಗಿ ನಾವು ಭಾರತವನ್ನು ಬೆಂಬಲಿಸಬೇಕು ಎಂದು ಹೇಳಿ ಜಾರ್ನೆಕಿ ಗಮನಸೆಳೆದಿದ್ದಾರೆ.