ಉಗ್ರರ ಗುಂಡೇಟಿಗೆ ಬಲಿಯಾಗಿಲ್ಲ, ಆತ್ಮಹತ್ಯೆಯಿಂದ ಹುಬ್ಬಳ್ಳಿಯ ಯೋಧ ಸಾವು

Public TV
1 Min Read
HBL Yodha

ಹುಬ್ಬಳ್ಳಿ: ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ ಹನಮಂತಪ್ಪ ಓಲೇಕಾರ(29) ಹುತಾತ್ಮರಾಗಿದ್ದರು ಎನ್ನಲಾಗಿತ್ತು. ಆದರೆ ಈಗ ಯೋಧ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಸೇನೆ ತಿಳಿಸಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ.

ಮಂಜುನಾಥ ತಮ್ಮ 20ನೇ ವಯಸ್ಸಿನಲ್ಲಿಯೇ ಭಾರತೀಯ ಸೇನೆಗೆ ಸೇರಿದ್ದರು. ಒಂಬತ್ತು ವರ್ಷದಿಂದ ಸೇನೆಯಲ್ಲಿದ್ದ ಅವರು ಸದ್ಯ ಮದ್ರಾಸ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಂಜುನಾಥ ಗಡಿ ಕಾಯಲು ಸೇನೆಗೆ ಮರಳಿದ್ದರು. ಈ ಮೊದಲು ಯೋಧ ಮಂಜುನಾಥ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು ಎಂದು ಮಾಹಿತಿ ಬಂದಿತ್ತು. ಆದರೆ ಈಗ ಭಾರತೀಯ ಸೇನೆ ಯೋಧ ಸಾವನ್ನಪ್ಪಿದ್ದು ಉಗ್ರರ ಅಟ್ಟಹಾಸಕ್ಕಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಕೊಟ್ಟಿದೆ.

HBL YODHA DEATH

ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಇಂದು ಸೇನೆಯಿಂದ ಈ ಮಾಹಿತಿ ರವಾನೆಯಾಗಿದೆ. ಯೋಧ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಅಂತ್ಯ ಸಂಸ್ಕಾರಕ್ಕೆ ಯಾವುದೇ ಸರ್ಕಾರಿ ಗೌರವ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಆದರೆ ಖಾಸಗಿಯಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದ್ದು, ಜಿಲ್ಲಾಡಳಿತದಿಂದ ಅಂತ್ಯ ಸಂಸ್ಕಾರಕ್ಕೆ ಅವಶ್ಯ ನೆರವು ನೀಡುವುದಾಗಿ ಡಿಸಿ ತಿಳಿಸಿದ್ದಾರೆ.

hbl yoda

ಈಗಾಗಲೇ ಸ್ವಗ್ರಾಮಕ್ಕೆ ಯೋಧ ಮಂಜುನಾಥ ಓಲೇಕಾರ ಅವರ ಪಾರ್ಥೀವ ಶರೀರ ತಲುಪಿದ್ದು, ಗ್ರಾಮದಲ್ಲಿ ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯೋಧನ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *