Connect with us

Bagalkot

ರಂಗೇರಿದ ಜಮಖಂಡಿ ಉಪಚುನಾವಣೆ ಕದನ – ಕೈ, ಕಮಲದಲ್ಲಿ ಬಂಡಾಯ ಭೀತಿ

Published

on

ಬಾಗಲಕೋಟೆ: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳಲಾಗುತ್ತಿರುವ ವಿಧಾನಸಭೆಯ ಉಪ ಚುನಾವಣೆಗಳ ಅಖಾಡ ರಂಗೇರುತ್ತಿದೆ. ಅದೇ ರೀತಿ ಜಮಖಂಡಿಯಲ್ಲೂ ಚುನಾವಣಾ ಜ್ವರ ಏರುತ್ತಿದ್ದು, ಅದಾಗಲೇ ಕೈ, ಕಮಲ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಅಂಗಳಕ್ಕೆ ಇಳಿದಿದ್ದಾರೆ. ಆದರೆ, ಅಭ್ಯರ್ಥಿಗಳನ್ನು ಎರಡು ಪಕ್ಷಗಳು ಫೈನಲ್ ಮಾಡುತ್ತಿದ್ದಂತೆ ಅಸಮಾಧಾನ ಹೊಗೆ ಕಾಣಿಸಿಕೊಂಡಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಭೀತಿ ಎದುರಾದರೆ, ಬಿಜೆಪಿಯ ಪ್ರಮುಖ ನಾಯಕ ಪಕ್ಷ ತೊರೆಯುವ ಆತಂಕ ಎದುರಾಗಿದೆ. ಇದರ ನಡುವೆಯೇ ಕೈ, ಕಮಲ ಅಭ್ಯರ್ಥಿಗಳು ಪ್ರಚಾರವನ್ನು ಆರಂಭಿಸಿದ್ದಾರೆ.

ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನ.3ರಂದು ಚುನಾವಣೆ ನಡೆಯಲಿದ್ದು ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡರನ್ನ ಈ ಬಾರಿ ಕಾಂಗ್ರೆಸ್ ಅಖಾಡಕ್ಕಿಳಿಸಲಿದೆ. ಇದಕ್ಕೆ ಜೆಡಿಎಸ್ ಬೆಂಬಲ ಕೂಡ ನೀಡಿದೆ. ಆದರೆ ಜಮಖಂಡಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಕೆಲ ಮುಖಂಡರು, ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ಇರುವ ಜೈನ ಸಮುದಾಯದ ಮುಖಂಡ ಸುಶೀಲಕುಮಾರ ಬೆಳಗಲಿ ಅವರಿಗೆ ಟಿಕೆಟ್ ನೀಡುವಂತೆ ರಾಜ್ಯ ನಾಯಕರಿಗೆ ಒತ್ತಡ ತಂದಿದ್ದರು. ಆದರೆ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅ. 13ರಂದು ಕಾರ್ಯಕರ್ತರೊಂದಿಗೆ ಚರ್ಚಿಸಿ ಬಂಡಾಯವಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆಯಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷದ ಆನಂದ ನ್ಯಾಮಗೌಡರಿಗೆ ಸಹಜವಾಗಿ ಅನುಕಂಪದ ಅಲೆ ಇದ್ದು, ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀ ರಕ್ಷೆ ಎಂದಿದ್ದಾರೆ. ಅ.16ರಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ಪಕ್ಷದಲ್ಲೂ ಹಲವು ಸುತ್ತಿನ ಮಾತುಕತೆ, ಸಭೆಗಳ ಬಳಿಕ ಕೊನೆಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಯವರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಹಾರಿಸಿದ ಬಂಡಾಯದ ಬಾವುಟದಿಂದಾಗಿ ಶ್ರೀಕಾಂತ ಕುಲಕರ್ಣಿ ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಆದರೆ ಈ ಬಾರಿ ನಿರಾಣಿ ಕುಟುಂಬದಿಂದ ಬಂಡಾಯ ಕಾಣಿಸುತ್ತಿಲ್ಲವಾದರೂ ಬಿಜೆಪಿಯ ಸಹ ಸಂಚಾಲಕ ಬಿಎಸ್ ಸಿಂಧೂರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಕ್ಷದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಪಕ್ಷ ತೊರೆಯುವ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದ್ದು, ಮಾನಸಿಕವಾಗಿ ಬಿಜೆಪಿಯಿಂದ ದೂರ ಉಳಿದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಮಾಜಿ ಸಚಿವ ಮುರುಗೇಶ ನಿರಾಣಿ ತಮ್ಮ ಪರಿವಾರದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನುಳಿದ ಮುಖಂಡರ ಜೊತೆ ರಾಜ್ಯ ನಾಯಕರು ಮಾತನಾಡಿದ್ದಾರೆ. ಕಾಂಗ್ರೆಸ್ ಅನುಕಂಪದ ಅಲೆ ನಂಬಿ ಕುಳಿತಿದೆ. ಅದು ಪ್ರಯೋಜನಕ್ಕೆ ಬರುವುದಿಲ್ಲ. ನನ್ನ ಅನುಭವ ಕೆಲಸ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರಾಜ್ಯ ನಾಯಕರೊಂದಿಗೆ ಚರ್ಚಿಸಿ ನಾಮಪತ್ರ ಸಲ್ಲಿಕೆಯ ದಿನಾಂಕ ಘೋಷಿಸುವುದಾಗಿ ಹೇಳಿದ್ದಾರೆ.  ಇದನ್ನು ಓದಿ: ರಾಮನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಕೈ ಎಂಎಲ್‍ಸಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆ

ಜಮಖಂಡಿ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು, ಎರಡು ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಎರಡು ಕಡೆಯಲ್ಲೂ ಅಸಮಾಧಾನದ ಹೊಗೆ ಕಾಣಿಸುತ್ತಿದ್ದು, ಇದು ಫಲಿತಾಂಶದ ಮೇಲೆ ಪರಿಣಾಮ ಬೀರತ್ತಾ ಎನ್ನುವ ಪ್ರಶ್ನೆಗೆ ನವೆಂಬರ್ 6 ರಂದು ಮತ ಎಣಿಕೆಯ ದಿನ ಉತ್ತರ ಸಿಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *