DistrictsKarnatakaLatestMain PostMysuru

ಕಣ್ಮನ ತಣಿಸಿದ ದಸರಾ ವೈಭವ: ಅನಾವರಣವಾಯ್ತು ಕಲಾ ಶ್ರೀಮಂತಿಕೆ

ಮೈಸೂರು: 407ನೇ ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ವಿಜಯದಶಮಿಯ ದಿನವಾದ ಶನಿವಾರ ನಡೆದ ಜಂಬೂ ಸವಾರಿ ಮನಸೂರೆಗೊಂಡಿತು.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.15ಕ್ಕೆ ಶುಭಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯ ಮುಖ್ಯದ್ವಾರದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಸಂಜೆ 4.45ಕ್ಕೆ ಸಿದ್ದರಾಮಯ್ಯ ಚಿನ್ನದ ಅಂಬಾರಿಯಲ್ಲಿ ಕುಳಿತಿದ್ದ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಈ ವೇಳೆ ಯುವರಾಜ ಯದುವೀರ್, ಮೇಯರ್ ರವಿಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಜಿಲ್ಲಾಧಿಕಾರಿ ಡಿ. ರಂದೀಪ್, ಸಂಸದ ಪ್ರತಾಪ್ ಸಿಂಹ ಶಾಸಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಗರ ಸಶಸ್ತ್ರ ಪಡೆಯ ಪೊಲೀಸರು 21 ಕುಶಾಲತೋಪುಗಳನ್ನು ಹಾರಿಸಿದರು. ಸಂಜೆ 5 ಗಂಟೆ ಹೊತ್ತಿಗೆ ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆ ಹಾಕತೊಡಗಿದ. ಅರ್ಜುನನಿಗೆ ಕುಮ್ಕಿ ಆನೆಗಳಾದ ಕಾವೇರಿ, ವಿಜಯಾ ಸಾಥ್ ನೀಡಿದರು. ಅರಮನೆ ಆವರಣದಲ್ಲಿ ಸ್ವಲ್ಪ ದೂರ ಸಾಗಿದ ವೇಳೆ ಅಶ್ವದಳದ ಕುದುರೆಯೊಂದು ಬೆದರಿ, ಆನೆ ವಿಜಯಗೆ ಡಿಕ್ಕಿ ಹೊಡೆಯಿತು. ಇದರಿಂದ ಗಲಿಬಿಲಿಗೊಂಡ ವಿಜಯಾ ಅಂಬಾರಿ ಸಾರಥಿ ಅರ್ಜುನನನ್ನು ತಳ್ಳಿತು. ಈ ವೇಳೆ, ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಕುಮ್ಕಿ ವಿಜಯಾ ಆನೆಯನ್ನು ಮಾವುತ ತಹಬದಿಗೆ ತಂದರು.

https://youtu.be/I05j3rIJEqk

 

ನಂತರ ಬಲರಾಂ ಗೇಟ್ ಮುಖಾಂತರ ಹೊರಗೆ ಬಂದ ಜಂಬೂ ಸವಾರಿ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆರ್ಯುವೇದಿಕ ಆಸ್ಪತ್ರೆ ವೃತ್ತ, ಆರ್‍ಎಂಸಿ ಬಸ್ ನಿಲ್ದಾಣ, ಬಂಬೂ ಬಜಾರ್ ರಸ್ತೆ, ನೆಲ್ಸನ್ ಮಂಡೇಲಾ ರಸ್ತೆ ಮೂಲಕ ಬನ್ನಿಮಂಟಪದಲ್ಲಿ ಅಂತ್ಯವಾಯಿತು.

ಸುಮಾರು ಐದೂವರೆ ಕಿ.ಮೀ.ನಲ್ಲಿ ಗಾಂಭೀರ್ಯದಿಂದ ಸಾಗಿದ ಜಂಬೂ ಸವಾರಿಯನ್ನು ರಸ್ತೆ ಇಕ್ಕೆಲಗಳಲ್ಲಿ ಉದ್ದಕ್ಕೂ ಜನ ಕಿಕ್ಕಿರಿದು ಸೇರಿ ದೇವಿಯ ದರ್ಶನ ಪಡೆದರು. ಸಯ್ಯಾಜಿ ರಾವ್ ರಸ್ತೆಗೆ ಸಿಮೆಂಟ್ ರಸ್ತೆ ಇದ್ದ ಕಾರಣ ಅರ್ಜುನ ಕೊಂಚ ಬಳಲಿದಂತೆ ಕಂಡು ಬಂದ ಆಮೇಲೆ 2 ಗಂಟೆ ಸಾಗಿ ಬನ್ನಿಮಂಟಪ ತಲುಪಿದ.

ಅರಮನೆಯ ವಾದ್ಯವೃಂದ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೋಲಿಸ್ ಬ್ಯಾಂಡ್‍ಗಳ ಸಂಗೀತ, ಪೂಜಾಕುಣಿತ, ಕರಡಿ ಮಜಲು, ನಂದಿಕೋಲು, ಮರಗಾಲು, ಹುಲಿವೇಷಧಾರಿಗಳೂ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ದಸರಾ ಜಂಬೂಸವಾರಿ ಮೆರವಣಿಗೆಗೆ ಮೆರಗು ತಂದಿದ್ದವು.

ರಾಜ್ಯದ ಕಲಾ ತಂಡಗಳಲ್ಲದೆ, ಪಂಜಾಬ್, ತೆಲಂಗಾಣ, ಒಡಿಸ್ಸಾ, ಡಾರ್ಜಲಿಂಗ್, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ಸುಮಾರು 40 ತಂಡಗಳು ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ವೀರರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ದಾರ್ಶನಿಕರ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಮೆರವಣಿಗೆಯಲ್ಲಿ ಕೆಎಸ್‍ಆರ್‍ಪಿ,ಅಂಡ್ ಗೈಡ್ಸ್, ಸೇವಾ ದಳ, ಮಹಿಳಾ ಪೊಲೀಸ್, ರಿಸರ್ವ್ ಪೊಲೀಸ್, ಅಗ್ನಿಶಾಮಕ ಸೇವೆ, ಮೌಂಟ್ ಬಿಟಾಲಿಯನ್, ಕರ್ನಾಟಕ ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ರಿದಂತೆ ಅರಮನೆಯ ವಾದ್ಯವೃಂದ, ಪಿರಂಗಿ ಗಾಡಿಗಳು, ವಿಶೇಷ ವೇಷಧಾರಿಗಳ ತಂಡ, ಅಲೆಮಾರಿಗಳ ತಂಡ ಸೇರಿದಂತೆ 30 ತಂಡಗಳು ಪಾಲ್ಗೊಂಡಿದ್ದವು

.

 

 

 

 

 

 

 

 

 

Leave a Reply

Your email address will not be published.

Back to top button