ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದ 100 ವರ್ಷದ ಬಳಿಕ ವಿಷಾದ ವ್ಯಕ್ತಪಡಿಸಿದ ಇಂಗ್ಲೆಂಡ್

Public TV
2 Min Read
Jallianwala Bagh

ನವದೆಹಲಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ 100 ವರ್ಷಗಳ ಬಳಿಕ ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರು, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಬ್ರಿಟೀಷರೇ ತಲೆತಗ್ಗಿಸುವ ಘಟನೆ. ಇದು ಇಂದಿಗೂ ಕೂಡ ಭಾರತದ ಸ್ವತಂತ್ರ್ಯ ಪೂರ್ವ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಬ್ರಿಟೀಷ್- ಭಾರತ ಇತಿಹಾಸದಲ್ಲೇ ಮಾಸಲಾಗದ ನೀಚ ಕೃತ್ಯ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. 100 ವರ್ಷಗಳ ಹಿಂದೆ ಏಪ್ರಿಲ್ 13, 1919ರಲ್ಲಿ ಜನರಲ್ ಡಯ್ಯರ್ ನೇತೃತ್ವದಲ್ಲಿ ಈ ಹತ್ಯಾಕಾಂಡ ನಡೆದಿತ್ತು. ಈ ಘಟನೆಯಲ್ಲಿ ಸಾವಿರಾರು ಭಾರತೀಯರು ಹತರಾಗಿದ್ದರು. ನಿಜವಾಗಿಯೂ ಇದೊಂದು ದುರಾದೃಷ್ಟಕರ ಘಟನೆ. ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ ಹಾಗೂ ಅದರಿಂದ ಉಂಟಾದ ಸಾವು ನೋವಿಗೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಇದು ಇಂದಿಗೂ ಕೂಡ ಭಾರತದ ಸ್ವತಂತ್ರ್ಯ ಪೂರ್ವ ಇತಿಹಾಸದಲ್ಲಿಯೇ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ ಎಂದು ತೆರೆಸಾ ಮೇ ಹೇಳಿದ್ದಾರೆ.

jallian walabagh

ಮಂಗಳವಾರದಂದು ಯುಕೆ ವಿದೇಶಾಂಗ ಕಚೇರಿ ಸಚಿವ ಮಾರ್ಕ್ ಫೀಲ್ಡ್ ಅವರು, ಈ ಹಿಂದೆ ಆಗಿರುವ ವಿಷಯವನ್ನು ಇಟ್ಟುಕೊಂಟು ಪದೇ ಪದೇ ಕ್ಷಮೆಯಾಚಿಸುವಂತೆ ಕೇಳುವುದು ಸರಿಯಲ್ಲ. ಹಿಂದೆ ಆದ ಘಟನೆಯನ್ನು ಮತ್ತೆ ಸರಿಮಾಡಲು ಆಗುವುದಿಲ್ಲ. ಅದನ್ನು ಅಲ್ಲಿಯೇ ಬಿಟ್ಟುಬಿಡಿ. ಇದರಿಂದ ಈಗ ಭಾರತ ಹಾಗೂ ಬ್ರಿಟನ್ ನಡುವಿನ ಸ್ನೇಹ ಸಂಬಂಧ ಹಾಳಾಗಬಾರದು ಎಂದು ಹೇಳಿದ್ದರು.

ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ ಭಾರತೀಯರ ಮನಸ್ಸಿನಲ್ಲಿ ಅಚ್ಚೆಹಾಕಿದ ರೀತಿ ಉಳಿದುಕೊಂಡಿದೆ. ಬ್ರಿಟೀಷರ ಅಟ್ಟಹಾಸಕ್ಕೆ ನೂರಾರು ಮಂದಿ ಅಮಾಯಕ ಭಾರತೀಯರು ಬಲಿಯಾಗಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ದುರಂತ ನಡೆದು 100 ವರ್ಷಗಳು ಕಳೆದಿದ್ದರೂ ಭಾರತೀಯರು ಮಾತ್ರ ಈ ಹತ್ಯಾಕಾಂಡವನ್ನು ಮರೆತಿಲ್ಲ.

jallianwala bagh 2

ಏನಿದು ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ?
1919ರಲ್ಲಿ `ರೌಲತ್ ಕಾಯ್ದೆ’ ಎನ್ನುವ ನೂತನ ಕಾಯ್ದೆಯೊಂದನ್ನು ಬ್ರಿಟಿಷ್ ಸರ್ಕಾರ ಜಾರಿಗೆ ತಂದಿತು. ದೇಶದ ಯಾವುದೇ ಪ್ರಜೆಯಾದರೂ ಸರಿ, ನ್ಯಾಯಾಲಯದ ಅಪ್ಪಣೆ ಇಲ್ಲದೆ, ಸರ್ಕಾರ ನೇರವಾಗಿ ಜೈಲಿಗೆ ದೂಡುವಂತಹ ಕಠಿಣ ಕ್ರಮವೇ ಈ ಕಾಯ್ದೆಯ ವಿಶೇಷತೆಯಾಗಿತ್ತು. ಈ ಕಾಯ್ದೆಯನ್ನು ವಿರೋಧಿಸಿ, ಇಂತಹ ಅನ್ಯಾಯದ ವಿರುದ್ಧ ಹೋರಾಟ ಮಾಡಲು ಪಂಜಾಬಿನ ಇಬ್ಬರು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಸತ್ಯಪಾಲ್ ಮತ್ತು ಸೈಫುದ್ದಿನ್ ಕಿಚ್ಲೌ ಅಮೃತಸರದ ಬಳಿ ಇರುವ ಜಲಿಯಾನ್ ವಾಲಾಬಾಗ್‍ನ ಆಯಕಟ್ಟಿನ ಪ್ರದೇಶವೊಂದರಲ್ಲಿ ಬೃಹತ್ ಸಮಾರಂಭವೊಂದನ್ನು ಹಮ್ಮಿಕೊಂಡಿದ್ದರು.

jallianwala bagh 3

ಮುಂದೆ ಈ ಜಾಗ ದೇಶದ ಇತಿಹಾಸದಲ್ಲಿ ಬಹುದೊಡ್ಡ ಕಪ್ಪುಚುಕ್ಕೆಯಾಗಿ ಉಳಿಯಲಿರುವ ಘಟನೆಯೊಂದು ಜರುಗಲಿದೆ ಅಂತ ಯಾವ ಭಾರತೀಯನೂ ಯೋಚಿಸಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ನೀಡದೇ ಹೊರಹೋಗುವ ಎಲ್ಲ ಮಾರ್ಗಗಳನ್ನು ಮುಚ್ಚಿ, ಜನರಲ್ ಡಯ್ಯರ್ ನೇತೃತ್ವದಲ್ಲಿ 50 ಜನರ ಗುಂಪೊಂದು ಏಕಾಏಕಿ ನೆರೆದಿದ್ದ ಜನತೆಯ ಮೇಲೆ ಗುಂಡಿನ ಸುರಿ ಮಳೆಗೈಯ್ಯಲಾರಂಭಿಸಿದರು. ಈ ವೇಳೆ ದಿಕ್ಕೇ ತೋಚದಂತಹ ಸ್ಥಿತಿಯಲ್ಲಿದ್ದ ಭಾರತೀಯರು ಅನಿವಾರ್ಯವಾಗಿ ಗುಂಡಿಗೆ ಬಲಿಯಾಗಬೇಕಾಯ್ತು. ಎಷ್ಟೋ ಜನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಯೆ ಇದ್ದ ಹಾಳು ಬಾವಿಗೆ ಹಾರಿದರು. ಆದರೂ ಬ್ರಿಟಿಷರು ಸ್ಪಲ್ಪವೂ ಕರುಣೆ ತೋರಿಸದೆ ಮನಬಂದಂತೆ ಗುಂಡು ಹಾರಿಸುವ ಮೂಲಕ 389 ಜನರ ಪ್ರಾಣ ತೆಗೆದರಲ್ಲದೆ, ದುರ್ಘಟನೆಯಲ್ಲಿ 1,516 ಜನ ಗಾಯಗೊಳ್ಳುವಂತೆ ಮಾಡಿದರು. ಆದರೆ, ಅನಧಿಕೃತ ಮೂಲಗಳ ಪ್ರಕಾರ ಈ ಘಟನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *