ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ (Mangaluru) ದಿನದ 24 ಗಂಟೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಸಿರಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಯೋಜನೆಯ ಅವ್ಯವಸ್ಥೆಯಿಂದಾಗಿ ಮಂಗಳೂರು ನಗರಕ್ಕೆ ಜಲಸಿರಿ ಶಾಪವಾಗಿ ಪರಿಣಮಿಸಿದೆ. ಕಾಮಗಾರಿ ಆರಂಭವಾಗಿ ಐದು ವರ್ಷವಾದರೂ ಒಂದೇ ಒಂದು ವಾರ್ಡ್ಗೂ ನೀರು ಪೂರೈಕೆ ಮಾಡದ ಗುತ್ತಿಗೆದಾರ ಸಂಸ್ಥೆ ರಸ್ತೆ ಅಗೆಯುವುದರಲ್ಲೇ ಬ್ಯುಸಿಯಾಗಿದ್ದು, ಆಡಳಿತ ವ್ಯವಸ್ಥೆಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ದಿನದ ಇಪ್ಪತ್ತನಾಲ್ಕು ಗಂಟೆ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶಕ್ಕೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆಯನ್ನು ಕೇಂದ್ರ, ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ 2019ರಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ, ಯೋಜನೆ ಜಾರಿಯಾಗಿ ಐದು ವರ್ಷವಾದರೂ ಇನ್ನು ಸಹ ಕಾಮಗಾರಿ ಪೂರ್ತಿಯಾಗಿಲ್ಲ. ಇದರ ಜೊತೆ ನಗರದ ಅಲ್ಲಲ್ಲಿ ರಸ್ತೆ ಅಗೆದು, ಸರಿಯಾಗಿ ಮುಚ್ಚದೇ ಅರ್ಧಕ್ಕೆ ಹೋಗುತ್ತಿರುವುದರಿಂದ ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ. ಇದನ್ನೂ ಓದಿ: ಪಾರ್ಕ್‌ನಲ್ಲಿ ದುಪಟ್ಟಾದಿಂದ ನೇಣು ಬಿಗಿದು ಎಂಜಿನಿಯರ್ ಆತ್ಮಹತ್ಯೆ
Advertisement
Advertisement
ಮಂಗಳೂರಿನಲ್ಲಿ ಹೊಸದಾದ ಕಾಂಕ್ರಿಟ್ ರಸ್ತೆಯನ್ನು ಮರುದಿನ ಅಗೆದರೂ ಸಹ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ ಎಂಬಂತಾಗಿದೆ. ಎರಡೆರಡು ಸಾರಿ ಕಾಮಗಾರಿಯ ಗಡುವನ್ನು ವಿಸ್ತರಣೆ ಮಾಡಿದರೂ ಸಹ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈವರೆಗೂ ಒಂದೇ ಒಂದು ವಾರ್ಡ್ಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡೋದಕ್ಕೆ ಗುತ್ತಿಗೆದಾರ ಸಂಸ್ಥೆಗೆ ಸಾಧ್ಯವಾಗಿಲ್ಲ. ಹೀಗಾಗಿ ಜನ ಆಡಳಿತ ವ್ಯವಸ್ಥೆಗೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
Advertisement
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 792.4 ಕೋಟಿ ವೆಚ್ಚದಲ್ಲಿ ಈ ಯೋಜನೆ ನಡೆಯುತ್ತಿದೆ. ಕಾಮಗಾರಿಯ ಗುತ್ತಿಗೆಯನ್ನು ಸೂಯೆಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಹಿಸಿಕೊಂಡಿದ್ದು, ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ವಹಿಸಿದೆ. ಆದರೆ, ಇಲ್ಲಿ ಕಾಮಗಾರಿ ವಹಿಸಿಕೊಂಡಿರುವ ಸಂಸ್ಥೆಯೇ ಬ್ಲ್ಯಾಕ್ ಲಿಸ್ಟ್ನಲ್ಲಿದೆ. ಇನ್ನು ಯೋಜನೆ ಹಳ್ಳ ಹಿಡಿದಿರುವುದಕ್ಕೆ ನಗರದ ಮೇರಿಹಿಲ್‌ನಲ್ಲಿ ರಸ್ತೆ ಬದಿ ಇಟ್ಟಿರುವ ಬೃಹತ್ತಾದ ಕೊಳವೆಗಳೆ ಸಾಕ್ಷಿಯಂತಿದೆ. ಪೈಪ್‌ಗಳ ಡಂಪ್ ಮಾಡಿರುವ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದೆ. ಇದನ್ನೂ ಓದಿ: Tumkur | `ಬೆಳಕು’ ಪ್ರಸಾರವಾದ 26 ದಿನದಲ್ಲೇ ಇಂಪ್ಯಾಕ್ಟ್ – ಸರ್ಕಾರಿ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ!
Advertisement
ಮುಖ್ಯ ಕೊಳವೆ ಅಳವಡಿಕೆ 54.16 ಕಿಲೋಮೀಟರ್‌ನಲ್ಲಿ ಆಗಬೇಕಾಗಿದ್ದು, ಇಲ್ಲಿ 12.26 ಕಿ.ಮೀ ಮಾತ್ರ ಪೂರ್ಣಗೊಳಿಸಲಾಗಿದೆ. ಇದರ ಜೊತೆ ಮನೆ ಮನೆಗೆ ನೀರು ವಿತರಣಾ ಜಾಲದ ಕೊಳವೆ ಅಳವಡಿಕೆ 1,288 ಕಿಲೋಮೀಟರ್‌ನಲ್ಲಿ ಆಗಬೇಕಾಗಿದ್ದು, ಕೇವಲ 740 ಕಿ.ಮೀ. ಮಾತ್ರ ಅಳವಡಿಕೆಯಾಗಿದೆ. ಇದರ ಜೊತೆ ಮೇಲ್ಮಟ್ಟದ ಜಲಸಂಗ್ರಹಗಾರ, ನೆಲಮಟ್ಟದ ಜಲಸಂಗ್ರಹಗಾರ, ಪಂಪ್ ಹೌಸ್, ನೀರು ಶುದ್ಧೀಕರಣ ಘಟಕಗಳ ಕಾಮಗಾರಿಯು ಪೆಂಡಿಂಗ್ ಇದೆ.
ಪ್ರತಿ ವಾರ್ಡ್ನಲ್ಲಿಯೂ ಯೋಜನೆಯಿಂದಾಗಿ ಸಮಸ್ಯೆ ಉದ್ಭವಿಸಿದ್ದು, ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಸಹ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ದಿನದಲ್ಲಿ 24 ಗಂಟೆ ಬೇಡ ಕನಿಷ್ಟ 3 ಗಂಟೆ ಆದರೂ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡಿ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಜಲಸಿರಿ ಯೋಜನೆಯ ಸಾಕಷ್ಟು ಅಧ್ವಾನಗಳಿಂದ ಜನರು, ಜನಪ್ರತಿನಿಧಿಗಳು ರೋಸಿ ಹೋಗಿರೊದಂತು ಸುಳ್ಳಲ್ಲ.