– ಅಭ್ಯರ್ಥಿಗಳ ಪಟ್ಟಿ ಕೂಡ ರೆಡಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಈ ತಿಂಗಳ 26 ರಿಂದ ಆರಂಭವಾಗಬೇಕಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಭಾಗದಲ್ಲೂ ಸೋಂಕು ಏರುತ್ತಲೇ ಇದೆ. ಸರ್ಕಾರ ಅದರ ನಿಯಂತ್ರಣಕ್ಕೆ ನೈಟ್ ಕಫ್ರ್ಯೂ, ವೀಕೆಂಡ್ ಲಾಕ್ಡೌನ್ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಜನರ ಹಿತದೃಷ್ಟಿಯಿಂದ ನಾವು ಜನತಾ ಜಲಧಾರೆಯ ಗಂಗಾ ರಥಯಾತ್ರೆಯನ್ನು ಮುಂದೂಡಿದ್ದೇವೆ. ಸೋಂಕು ಇಳಿಮುಖವಾದ ಕೂಡಲೇ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.
Advertisement
ಪೂರ್ವ ನಿಗದಿಯಂತೆ ಈ ತಿಂಗಳ 26 ರಂದು ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಪಕ್ಷ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್‍ನವರಂತೆ ನಮಗೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಮಾಡುವ ಧಾವಂತ ಇಲ್ಲ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ಗಂಗಾ ರಥಯಾತ್ರೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ವರ್ಕ್ ಫ್ರಮ್ ಹೋಂ ಮಹಿಳೆಯರಿಗೆ ಟ್ರಿಪಲ್ ಹೊರೆ: ರಾಮನಾಥ್ ಕೋವಿಂದ್
Advertisement
ಮುನ್ನ ನಾವು ಜನರಿಗೆ ಈ ಬಗ್ಗೆ ಪೂರ್ಣ ಮಾಹಿತಿ ನೀಡುತ್ತೇವೆ. ಪ್ರತಿ ಮನೆ-ಮನೆಗೂ ಕರಪತ್ರ ಸೇರಿದಂತೆ ಬೇರೆ ಬೇರೆ ರೂಪದಲ್ಲಿ ಜಲಧಾರೆ ಮಾಹಿತಿ ಕೊಡಲಾಗುವುದು. ರಾಜ್ಯದ ನೀರಾವರಿಗೆ ಪಕ್ಷ ನೀಡಿರುವ ಕೊಡುಗೆಗಳನ್ನು ತಿಳಿಸಲಾಗುವುದು. ಮುಖ್ಯವಾಗಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ನೀಡಿರುವ ಕೊಡುಗೆಗಳ ಬಗ್ಗೆ ವಿವಿಧ ರೂಪದಲ್ಲಿ ಜನರಿಗೆ ಮನದಟ್ಟಾಗುವಂತೆ ಹೇಳಲಾಗುವುದು ಎಂದು ಹೇಳಿದರು.
Advertisement
ನಮ್ಮ ಕಾರ್ಯಕ್ರಮದಲ್ಲಿ ಮುಚ್ಚುಮರೆ ಏನೂ ಇಲ್ಲ. ನಮಗೆ ಐದು ವರ್ಷ ಪೂರ್ಣ ಪ್ರಮಾಣದ ಸರ್ಕಾರ ನೀಡಿದರೆ ರಾಜ್ಯದಲ್ಲೇ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಕೈಕೊಳ್ಳುತ್ತೇವೆ. ಅವುಗಳನ್ನು ಹೇಗೆ ಮಾಡಿ ತೋರಿಸುತ್ತೇವೆ ಎಂಬುದನ್ನು ಜಲಧಾರೆ ಕಾರ್ಯಕ್ರಮದ ಮೂಲಕ ಪ್ರಾಮಾಣಿಕವಾಗಿ ರಾಜ್ಯದ ಮುಂದಿಡುತ್ತೇವೆ ಎಂದು ವಿವರಿಸಿದರು.
Advertisement
ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುತ್ತಿದೆ!
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ರಾಜ್ಯದ ನೀರಾವರಿ ಹಿತವನ್ನು ಕಡೆಗಣಿಸುತ್ತಿದೆ. ಅವರಿಗೆ ಮತಗಳ ಮೇಲೆ ಮೋಹ ಜಾಸ್ತಿ. ಚುನಾವಣೆ ಹತ್ತಿರ ಬಂದಾಗ ಆ ಪಕ್ಷಕ್ಕೆ ಮೇಕೆದಾಟು ನೆನಪಾಗಿದೆ ಎಂದು ಟೀಕಿಸಿದರು.
ನಮ್ಮ ನೀರು-ನಮ್ಮ ಹಕ್ಕು ಎಂಬ ಕಾರ್ಯಕ್ರಮವನ್ನು ಕಾಂಗ್ರೆಸ್ ಈಗ ಮಾಡಲು ಹೊರಟಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಮಹಾದಾಯಿ ನೀರಿಗಾಗಿ ಹೋರಾಟ ಮಾಡ್ತಿದ್ದ ರೈತರ ಮೇಲೆ ಕಾಂಗ್ರೆಸ್ ಪೊಲೀಸ್ ದೌರ್ಜನ್ಯ ನಡೆಸಿತ್ತು. ಯಮನೂರು ಎಂಬ ಗ್ರಾಮದಲ್ಲಿ ಹಳ್ಳಿಗಳಿಗೆ ನುಗ್ಗಿ ಹೆಣ್ಣುಮಕ್ಕಳ ಮೇಲೆ ಮೈ ಮೇಲೆ ಬಾಸುಂಡೆ ಬರುವಂತೆ ದೌರ್ಜನ್ಯ ಮಾಡಿಸಿದ್ದು ಕಾಂಗ್ರೆಸ್. ಅವತ್ತು ನಮ್ಮ ನೀರು-ನಮ್ಮ ಹಕ್ಕು ಅಂತಾ ಹೋರಾಟ ಮಾಡುತ್ತಿದ್ದವರು ರೈತರು ಮಾತ್ರ. ಆದರೆ ಮನೆಹಾಳು ಮಾಡಿದ್ದು, ಕಾಂಗ್ರೆಸ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಗಳೂರು ಕಾಂಗ್ರೆಸ್ ಸಭೆಯಲ್ಲಿ ಹೈಡ್ರಾಮಾ – ಸದಸ್ಯರನ್ನೇ ಹೊರಹಾಕಿದ ನಾಯಕರು
ಇಂದು ಪಕ್ಷದ ರಾಜ್ಯ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ರಾಜ್ಯದ 30 ಜಿಲ್ಲೆಗಳ ಅಧ್ಯಕ್ಷರ ಸಭೆ ಕರೆದಿದ್ದೇವೆ. ಪಕ್ಷದ ವತಿಯಿಂದ ರಾಜ್ಯದ 51 ಸ್ಥಳಗಳಿಂದ ನೀರು ಸಂಗ್ರಹ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ನಡೆಸಬೇಕಾದ ಸಿದ್ಧತೆಗಳ ಬಗ್ಗೆ ಮತ್ತೊಮ್ಮೆ ಮನದತ್ತು ಮಾಡಿಕೊಟ್ಟಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭ್ಯರ್ಥಿಗಳ ಪಟ್ಟಿ ಕೂಡ ರೆಡಿ
ಈ ಮೊದಲೇ ಹೇಳಿದಂತೆ ಜೆಡಿಎಸ್ ಪಕ್ಷದ ಮುಂದಿನ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಕೊರೊನ ಕಾರಣಕ್ಕೆ ಅದನ್ನು ಪ್ರಕಟ ಮಾಡುವುದು ವಿಳಂಬವಾಗಿದೆ. ಸೋಂಕು ನಿಯಂತ್ರಣಕ್ಕೆ ಬಂದ ಕೂಡಲೇ ನಮ್ಮ ಪಟ್ಟಿಯೂ ಹೊರಬರುತ್ತದೆ ಎಂದು ತಿಳಿಸಿದರು.