SCO Summit 2024: ಪಾಕ್‌ ನೆಲದಲ್ಲಿ ಜೈಶಂಕರ್‌ಗೆ ಆತ್ಮೀಯ ಸ್ವಾಗತ

Public TV
2 Min Read
Jaishankar Pakistan PM Shehbaz Sharif Meet At SCO Dinner 1

ಇಸ್ಲಾಮಾಬಾದ್‌: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರು ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಭಾಗವಹಿಸಲು ಇಸ್ಲಾಮಾಬಾದ್‌ಗೆ (Islamabad) ಮಂಗಳವಾರ ಸಂಜೆ ಆಗಮಿಸಿದರು.

ಕಾಶ್ಮೀರ ಸಮಸ್ಯೆ ಮತ್ತು ಭಯೋತ್ಪಾದನೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದೇಶಗಳ ಮಧ್ಯೆ ದ್ವೇಷಮಯ ವಾತಾವರಣ ಇರುವಾಗ ಸುಮಾರು 9 ವರ್ಷದ ನಂತರ ಭಾರತದ ಮಂತ್ರಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು ವಿದೇಶಾಂಗ ಸಚಿವೆಯಾಗಿದ್ದ ದಿ. ಸುಷ್ಮಾ ಸ್ವರಾಜ್‌ ಅವರು ಪಾಕಿಸ್ತಾನಕ್ಕೆ 2015ರ ಡಿಸೆಂಬರ್‌ನಲ್ಲಿ ಭೇಟಿ ನೀಡಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ದಕ್ಷಿಣ ಏಷ್ಯಾದ ಮಹಾನಿರ್ದೇಶಕ ಇಲ್ಯಾಸ್ ಮೆಹಮೂದ್ ನಿಜಾಮಿ ಅವರು ಇಸ್ಲಾಮಾಬಾದ್‌ನ ನೂರ್ ಖಾನ್ ವಾಯುನೆಲೆಯಲ್ಲಿ ಜೈಶಂಕರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಕ್ಕಳು ಹೂಗುಚ್ಛಗಳನ್ನು ಅರ್ಪಿಸಿದರು.

 

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (shehbaz sharif) ಅವರು ರಾತ್ರಿ ಭೋಜನ ಕೂಟವನ್ನು ಆಯೋಜಿಸಿದ್ದರು. ಈ ಕೂಟಕ್ಕೆ ಆಗಮಿಸಿದ್ದ ಜೈಶಂಕರ್‌ ಅವರನ್ನು ಶೆಹಬಾಜ್ ಷರೀಫ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಪಾಕ್‌ ಜೊತೆ ಮಾತುಕತೆ ಇಲ್ಲ
ಇತ್ತೀಚಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜೈಶಂಕರ್‌ , ಯಾವುದೇ ನೆರೆಹೊರೆಯವರಂತೆ, ಭಾರತವು ಖಂಡಿತವಾಗಿಯೂ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಬಯಸುತ್ತದೆ. ಆದರೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸದ ಹೊರತು ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದ್ದರು.

SCO ಸದಸ್ಯನಾಗಿ ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದೆನೆಯೇ ಹೊರತು ಭಾರತ ಪಾಕಿಸ್ತಾನ ಸಂಬಂಧಗಳನ್ನು ಚರ್ಚಿಸಲು ಅಲ್ಲ ಎಂದು ತಿಳಿಸಿದ್ದರು.

 

ಭಾರತ, ಪಾಕಿಸ್ತಾನ, ರಷ್ಯಾ, ಚೀನಾ, ಇರಾನ್ ಮತ್ತು ಮಧ್ಯ ಏಷ್ಯಾದ 4 ದೇಶಗಳು ಸದಸ್ಯ ಆಗಿರುವ ಈ ಒಕ್ಕೂಟಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಮಾತ್ರ ಪಾಕ್‌ಗೆ ತೆರಳಿರುವ ಜೈಶಂಕರ್ ಅವರು ಇಸ್ಲಾಮಾಬಾದ್‌ನಲ್ಲಿ ಕೇವಲ 24 ಗಂಟೆಗಳ ಕಾಲ ಇರುತ್ತಾರೆ. ಸಭೆ ಮುಗಿದ ನಂತರ ಬುಧವಾರ ಅವರು ಭಾರತಕ್ಕೆ ಮರಳಲಿದ್ದಾರೆ.

 

Share This Article