ಅಮೆರಿಕ ನೆಲದಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

Public TV
2 Min Read
jaishankar 1

ವಾಷಿಂಗ್ಟನ್‌: ಅಮೆರಿಕದ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲೆ ಭಾರತವೂ ಕಣ್ಣಿಟ್ಟಿದೆ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳುವ ಮೂಲಕ ಅಮೆರಿಕ ನೆಲದಲ್ಲೇ ಅಮೆರಿಕ್ಕೆ ತಿರುಗೇಟು ನೀಡಿದ್ದಾರೆ.

ಹೌದು. ಅಮೆರಿಕದ ಜನಪ್ರತಿನಿಧಿಗಳು ಭಾರತದ ಪರಿಸ್ಥಿತಿಯ ಬಗ್ಗೆ ಮಾತನಾಡುವುದು ಹೊಸದೆನಲ್ಲ. ಆದರೆ ಭಾರತ ಸರ್ಕಾರದ ಪ್ರತಿನಿಧಿಯಾದ ಜೈ ಶಂಕರ್‌ ಅವರು ಅಮೆರಿಕ ನೆಲದಲ್ಲೇ ಅಮೆರಿಕದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ನಮ್ಮ ದೇಶದ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದರೆ ನಮಗೂ ನಿಮ್ಮ ಬಗ್ಗೆ ಧೈರ್ಯವಾಗಿ ಬಹಿರಂಗವಾಗಿ ಹೇಳಲು ಬರುತ್ತದೆ ಎಂಬ ಖಡಕ್‌ ಸಂದೇಶವನ್ನು ರವಾನಿಸಿದ್ದಾರೆ.

jaishankar 2

ಬ್ಲಿಂಕನ್‌ ಹೇಳಿದ್ದೇನು?
ಅಮೆರಿಕ, ಭಾರತ ಮಧ್ಯೆ ನಡೆದ 2+2 ಸಭೆಯ ನಂತರ ಜಂಟಿ ಸಮ್ಮೇಳನದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕನ್, ಭಾರತದಲ್ಲಿನ ಕೆಲವು ರಾಜ್ಯಗಳಲ್ಲಿ ಪೊಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ, ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದಂತಹ ಕೆಲವು ಘಟನೆಗಳನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದ್ದರು.

ಜೈಶಂಕರ್‌ ಹೇಳಿದ್ದೇನು?
ಭಾರತ ಮತ್ತು ಅಮೆರಿಕದ ಮಧ್ಯೆ ನಡೆದ ಮಾತುಕತೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಚರ್ಚಿಸಿಲ್ಲ. ಈ ಸಭೆಯಲ್ಲಿ ಮುಖ್ಯವಾಗಿ ರಾಜಕೀಯ-ಮಿಲಿಟರಿ ವಿಷಯಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಎಂದು ಸ್ಪಷ್ಟಪಡಿಸಿದರು. ಜನರು ಭಾರತದ ಬಗ್ಗೆ ಕಲ್ಪನೆಗಳನ್ನು ಹೊಂದಬಹುದು. ಅಮೆರಿಕದ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲೆ ಭಾರತವೂ ಕಣ್ಣಿಟ್ಟಿದೆ. ಭಾರತದ ಬಗ್ಗೆ ಒಂದು ರೀತಿಯ ಲಾಬಿ ಮತ್ತು ವೋಟ್ ಬ್ಯಾಂಕ್ ಇಂತಹ ಸಮಸ್ಯೆಗಳನ್ನು ಮುಂದಿಡುತ್ತದೆ ಎಂದು ನೇರವಾಗಿ ಜೈಶಂಕರ್‌ ಹೇಳಿದ್ದಾರೆ.  ಇದನ್ನೂ ಓದಿ: ಮುಸ್ಲಿಮರು ಬಿಜೆಪಿ ವಿರೋಧಿಸುವುದನ್ನು ನಿಲ್ಲಿಸಬೇಕು: ಮುಸ್ಲಿಂ ಧರ್ಮಗುರು ಸಲಹೆ

jaishankar1

ಪತ್ರಕರ್ತೆಗೆ ಪಾಠ:
ವಿದೇಶಾಂಗ ಇಲಾಖೆಯಲ್ಲಿ ಅಪಾರ ಅನುಭವ ಇರುವ ಜೈಶಂಕರ್‌ ಈ ಮೊದಲು ವಿದೇಶಿ ಪತ್ರಕರ್ತೆಗೆ ಸುದ್ದಿಗೋಷ್ಠಿಯಲ್ಲೇ ಪಾಠ ಮಾಡಿದ್ದರು. ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲವನ್ನು ಖರೀದಿಸುತ್ತಿರುವ ಬಗ್ಗೆ ಆಕ್ಷೇಪ ಎತ್ತಿ ಪ್ರತಕರ್ತೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಜೈ ಶಂಕರ್‌, ನೀವು ತೈಲ ಖರೀದಿಯ ಬಗ್ಗೆ ಉಲ್ಲೇಖಿಸಿದ್ದನ್ನು ನಾನು ಗಮನಿಸಿದ್ದೇನೆ. ರಷ್ಯಾದಿಂದ ಇಂಧನ ಖರೀದಿಗೆ ಸಂಬಂಧಿಸಿದಂತೆ ನಿಮ್ಮ ಗಮನವನ್ನು ಯುರೋಪ್ ಕಡೆಗೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ನಾವು ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸುತ್ತೇವೆ. ಆದರೆ ಅಂಕಿಅಂಶಗಳನ್ನು ನೋಡುವಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಯು ಯುರೋಪ್‌ನ ಅರ್ಧ ದಿನದಲ್ಲಿ ಬಳಕೆ ಆಗುತ್ತಿರುವ ತೈಲ ಪ್ರಮಾಣಕ್ಕಿಂತ ಕಡಿಮೆಯಿರಬಹುದು. ಆದ್ದರಿಂದ ನೀವು ಯುರೋಪ್‌ ಬಗ್ಗೆ ಗಮನ ಹರಿಸುವುದು ಉತ್ತಮ ಎಂದು ತಿರುಗೇಟು ನೀಡಿದ್ದರು. ಇದನ್ನೂ ಓದಿ: ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ: ವಿಶೇಷತೆ ಏನು? ಟಿಕೆಟ್‌ ದರ ಎಷ್ಟು?

ವಿದೇಶಿ ಮಾಧ್ಯಮಗಳು ಭಾರತದ ವಿರುದ್ಧ ಸುದ್ದಿ ಮಾಡುವುದರ ಜೊತೆ ಪಾಶ್ಚಿಮಾತ್ಯ ಸರ್ಕಾರಗಳ ತಾಳಕ್ಕೆ ಭಾರತ ಕುಣಿಯಬೇಕು ಎಂದು ಬಯಸುತ್ತಿರುತ್ತವೆ. ಈ ಕಾರಣಕ್ಕೆ ರಷ್ಯಾದಿಂದ ಭಾರತ ತೈಲ ಖರೀದಿ, ಎಸ್‌400 ವಾಯು ರಕ್ಷಣಾ ವ್ಯವಸ್ಥೆ ಖರೀದಿಗೆ ಆಕ್ಷೇಪ ವ್ಯಕ್ತಪಡಿಸಿ ವರದಿ ಪ್ರಕಟಿಸುತ್ತಿವೆ. ಆದರೆ ಭಾರತ ಈ ಕುತಂತ್ರಕ್ಕೆ ಬಗ್ಗದೇ ರಷ್ಯಾದ ಜೊತೆ ವ್ಯವಹಾರ ಮಾಡುವುದರ ಜೊತೆಗೆ ವಿದೇಶಿ ವೇದಿಕೆಗಳಲ್ಲೇ ಪ್ರಶ್ನೆಗಳಿಗೆ ಖಡಕ್‌ ಉತ್ತರ ನೀಡುತ್ತಿದೆ. ಯುರೋಪ್‌ ದೇಶಗಳು ರಷ್ಯಾದ ಜೊತೆ ವ್ಯವಹಾರ ನಡೆಸುತ್ತಿರುವಾಗಲೇ ನಮ್ಮ ನಡೆಯ ಬಗ್ಗೆ ಪ್ರಶ್ನೆ ಮಾಡುವುದು ಎಷ್ಟು ಸರಿ ಎನ್ನುವುದು ಭಾರತದ ನಿಲುವು.

Share This Article
Leave a Comment

Leave a Reply

Your email address will not be published. Required fields are marked *