ಶ್ರೀನಗರ(ಜಮ್ಮು-ಕಾಶ್ಮೀರ): 44 ಮಂದಿ ಭಾರತೀಯ ಯೋಧರನ್ನ ಬಲಿ ಪಡೆದ ಪುಲ್ವಾಮಾ ದಾಳಿ ಜಸ್ಟ್ ಟ್ರೇಲರ್ ಆಗಿದ್ದು, ಭಾರತದ ಸೇನೆಯ ಮೇಲೆ ಇನ್ನಷ್ಟು ಭೀಕರ ದಾಳಿಗೆ ಜೈಶ್ ಇ ಮೊಹಮ್ಮದ್ ಸಂಚು ರೂಪಿಸಿರುವ ಮಾಹಿತಿಯೊಂದು ಹೊರಬಿದ್ದಿದೆ.
ಜಮ್ಮು-ಕಾಶ್ಮೀರ ಮತ್ತು ಹೊರಗೆ ದಾಳಿ ಸಂಚಿನ ಸಂಬಂಧ ಗುಪ್ತಚರ ದಳಗಳಿಗೆ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್‍ನಲ್ಲೇ ಜಮ್ಮು-ಕಾಶ್ಮೀರಕ್ಕೆ ನುಸುಳಿರುವ ಜೈಶ್ ಇ ಮೊಹಮ್ಮದ್‍ನ 21 ಮಂದಿ ಉಗ್ರರು, ಒಂದು ದಾಳಿ ಕಾಶ್ಮೀರದಲ್ಲಿ ಹಾಗೂ ಉಳಿದೆರಡು ದಾಳಿಯನ್ನು ಭಾರತದ ಬೇರೆ ಕಡೆಗಳಲ್ಲಿ ಎಸಗಲು ಸಂಚು ರೂಪಿಸಿದ್ದಾರೆ.
ಜೆಇಎಂ ಪುಲ್ವಾನಾ ದಾಳಿಯ ಸಿದ್ಧತೆಯ ವೀಡಿಯೊವನ್ನು ಕೂಡಾ ಇಷ್ಟರಲ್ಲೇ ಬಿಡುಗಡೆ ಮಾಡಲಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ. ಸ್ಫೋಟಕ ತುಂಬಿದ್ದ ಕಾರನ್ನು ಭದ್ರತಾ ಪಡೆ ವಾಹನಗಳಿಗೆ ಡಿಕ್ಕಿ ಹೊಡೆಸಿದ 20 ವರ್ಷದ ಅದಿಲ್ ಅಹ್ಮದ್ ದಾರ್ ನನ್ನು ವೈಭವೀಕರಿಸುವುದು ಈ ದಾಳಿಯ ಪ್ರಮುಖ ಉದ್ದೇಶವಾಗಿದೆ ಎಂಬುದಾಗಿ ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದಲ್ಲಿರುವ ಜೆಇಎಂ ನಾಯಕರು ಮತ್ತು ಕಾಶ್ಮೀರದಲ್ಲಿರುವ ಉಗ್ರರ ನಡುವೆ ಫೆಬ್ರವರಿ 16 ಮತ್ತು 17ರಂದು ನಡೆದ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದಾಗ ಈ ಅಂಶ ತಿಳಿದುಬಂದಿದೆ ಎಂದು ಗುಪ್ತಚರ ವಿಭಾಗದ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv