ಜೈಪುರ: ವಧುವಿನ ತಂದೆ ವರನಿಗೆ ಮದುವೆ ಸಮಾರಂಭದಲ್ಲಿ ನೀಡಲು ಬಂದ 11 ಲಕ್ಷ ರೂ. ವರದಕ್ಷಿಣೆಯನ್ನು ವರ ನಿರಾಕರಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಸಿಐಎಸ್ಎಫ್ ಯೋಧ ಜಿತೇಂದ್ರ ಸಿಂಗ್ ವರದಕ್ಷಿಣೆ ನಿರಾಕರಿಸಿ ಮಾದರಿಯಾಗಿದ್ದು, ಇದೇ ತಿಂಗಳ 8 ರಂದು ಜೈಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮದುವೆಯ ವೇಳೆ ವಧುವಿನ ತಂದೆ ಸಾಂಪ್ರಧಾಯಿಕವಾಗಿ ನೀಡುವ ತೆಂಗಿನ ಕಾಯಿಯೊಂದಿಗೆ 11 ಲಕ್ಷ ರೂ. ಗಳನ್ನು ವರನಿಗೆ ನೀಡಲು ತಂದಿದ್ದರು. ಆದರೆ ವರದಕ್ಷಿಣೆಯನ್ನು ನಿರಾಕರಿಸಿದ ಜಿತೇಂದ್ರ ಅವರು ಕೇವಲ 11 ರೂ. ಹಾಗೂ ತೆಂಗಿನ ಕಾಯಿಯನ್ನು ಸ್ವೀಕರಿಸಿದ್ದಾರೆ.
Advertisement
Advertisement
ವರದಕ್ಷಿಣೆ ನಿರಾಕರಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಜಿತೇಂದ್ರ ಸಿಂಗ್, ತಾನು ಮದುವೆಯಾಗುತ್ತಿರುವ ಯುವತಿ ರಾಜಸ್ಥಾನ ನ್ಯಾಯಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸಲು ಪರೀಕ್ಷೆಯನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಆಗಲಿದ್ದಾರೆ. ಇದು ನಮ್ಮ ಕುಟುಂಬಕ್ಕೆ ಹೆಮ್ಮೆ ಎನಿಸಲಿದ್ದು, ಹಣಕ್ಕಿಂತಲೂ ಹೆಚ್ಚಿನ ಗೌರವವನ್ನು ತಂದುಕೊಡುತ್ತದೆ ಎಂದಿದ್ದಾರೆ.
Advertisement
ವಧುವಿನ ತಂದೆ ಗೋವಿಂದ್ ಸಿಂಗ್ ಮಾತನಾಡಿ, ಮೊದಲು ವರ ವರದಕ್ಷಿಣೆ ಬೇಡ ಎನ್ನುತ್ತಿದಂತೆ ನನಗೆ ಶಾಕ್ ಆಗಿತ್ತು. ವರನ ಕುಟುಂಬಸ್ಥರಿಗೆ ಮದುವೆ ಕಾರ್ಯಗಳು ಖುಷಿ ಕೊಟ್ಟಿಲ್ಲ ಎನಿಸಿತ್ತು. ಆದರೆ ಆ ಬಳಿಕವೇ ಅವರು ವರದಕ್ಷಿಣೆ ನಿರಾಕರಿಸುತ್ತಿರುವ ಕಾರಣ ತಿಳಿಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಜಿತೇಂದ್ರ ಸಿಂಗ್ ಅವರ ಪತ್ನಿ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಈಗ ಡಾಕ್ಟರೇಟ್ ಓದುತ್ತಿದ್ದಾರೆ. ಮದುವೆಯಾದ ಬಳಿಕವೂ ವಿದ್ಯಾಭ್ಯಾಸ ಮುಂದುವರಿಸಲು ಕುಟುಂಬಸ್ಥರು ಸಮ್ಮತಿ ಸೂಚಿಸಿದ್ದಾರೆ.