ಚಿಕ್ಕೋಡಿ: ಆಪ್ತರಿಂದ ಹತ್ಯೆಗೀಡಾಗಿದ್ದ ಜೈನಮುನಿ (Jain Muni) ಕಾಮಕುಮಾರ ನಂದಿ ಮಹಾರಾಜರ ಅಂತ್ಯಸಂಸ್ಕಾರ ಜೈನ ಧರ್ಮದ ಸಂಪ್ರದಾಯದಂತೆ ಭಾನುವಾರ (ಇಂದು) ಹಿರೇಕೋಡಿಯ ನಂದಿಪರ್ವತದ ಆಶ್ರಮದ (Nandi Parvatha Ashram) ಬಳಿ ನೆರವೇರಿತು.
ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರನ ಪುತ್ರ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಚಿತೆಗೆ ಹಾಲು, ಬೆಲ್ಲ, ಕೊಬ್ಬರಿ, ಕರ್ಪೂರ, ಗಂಧದ ಕಟ್ಟಿಗೆ, ಬಾದಾಮಿ, ತುಪ್ಪವನ್ನು ಎರೆಯಲಾಯಿತು. ಈ ವೇಳೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ – ಪೀಸ್ ಪೀಸ್ ಮಾಡಿ ಎಸೆದ ಹಂತಕರು
ಸ್ವಾಮೀಜಿ ಹತ್ಯೆ ಖಂಡಿಸಿ ಸೋಮವಾರ ಮೌನ ಪ್ರತಿಭಟನೆಗೆ ಜೈನ ಸಮುದಾಯ ಮುಂದಾಗಿದೆ. ಸ್ವಾಮೀಜಿಯವರ ಸಾವಿಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ವಾಮೀಜಿಯವರ ಹತ್ಯೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಜುಲೈ 6ರಿಂದ ನಂದಿ ಪರ್ವತ ಆಶ್ರಮದ ಜೈನಮುನಿಗಳು ನಾಪತ್ತೆಯಾಗಿದ್ದರು. ಸ್ವಾಮೀಜಿಯ ನಾಪತ್ತೆಯ ಕುರಿತು ಭಕ್ತರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಬಳಿಕ ಜೈನಮುನಿಗಳ ಮೃತದೇಹವನ್ನು ಖಟಕಬಾವಿಯ ಗದ್ದೆಯಲ್ಲಿದ್ದ ತೆರೆದ ಕೊಳವೆಬಾವಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ನಾಪತ್ತೆಯಾಗಿದ್ದ ಜೈನಮುನಿ ಹತ್ಯೆ – ಭಕ್ತರ ದೂರಿನ ಬಳಿಕ ಪ್ರಕರಣ ಬೆಳಕಿಗೆ
Web Stories