ತಮಿಳಿನ ‘ಜೈಲರ್’ (Jailer) ಖ್ಯಾತಿಯ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar) ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ಹೊಸ ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ನೆಲ್ಸನ್ ಹೊಸ ಹೆಜ್ಜೆಗೆ ಅಭಿಮಾನಿಗಳು ಶುಭಕೋರಿದ್ದಾರೆ. ಇದನ್ನೂ ಓದಿ:‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಫಾಲ್ಕೆ ಜ್ಯೂರಿ ಅವಾರ್ಡ್
20ರ ಹರೆಯದಲ್ಲಿ ನನ್ನ ಸಿನಿಮಾ ಪಯಣ ಶುರುವಾಗಿದ್ದು, ಇಂಡಸ್ಟ್ರಿ ನನಗೆ ಹಲವು ವರ್ಷಗಳಿಂದ ಏರಿಳಿತಗಳನ್ನು ನೀಡಿದೆ. ಇವೆಲ್ಲವೂ ನನ್ನ ಬೆಳವಣಿಗೆಗೆ ಕಾರಣವಾಗಿವೆ. ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸಬೇಕು ಎಂಬುದು ನನ್ನ ಬಹುದಿನಗಳ ಕನಸು. ಆ ಕನಸು ಇದೀಗ ನನಸಾಗಿದೆ. ‘ಫಿಲಮೆಂಟ್ ಪಿಕ್ಚರ್ಸ್’ ಎಂಬ ನನ್ನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲು ನಾನು ಹೆಮ್ಮೆಪಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಡೈರೆಕ್ಟರ್ ನೆಲ್ಸನ್ ಬರೆದುಕೊಂಡಿದ್ದಾರೆ.
ಪ್ರೇಕ್ಷಕರನ್ನು ರಂಜಿಸಲು ಸೃಜನಶೀಲ ಮತ್ತು ಆಸಕ್ತಿದಾಯಕ ವಿಷಯವನ್ನು ಒದಗಿಸುವುದು ನಮ್ಮ ಕಂಪನಿಯ ಮುಖ್ಯ ಗುರಿಯಾಗಿದೆ ಎಂದು ಪ್ರಸ್ತಾಪಿಸಿದ ನೆಲ್ಸನ್, ಮೇ 3ರಂದು ತಮ್ಮ ನಿರ್ಮಾಣ ಕಂಪನಿಯ ಮೊದಲ ಚಿತ್ರದ ಮಾಹಿತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಕಳೆದ ವರ್ಷ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈಗ ಇದರ ಸೀಕ್ವೆಲ್‌ಗೆ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ತಲೈವಾ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ.