Connect with us

Latest

6 ಮಂದಿಯನ್ನು ಹತ್ಯೆಗೈದಿದ್ದ ಸೈನೈಡ್ ಕಿಲ್ಲರ್ ಆತ್ಮಹತ್ಯೆಗೆ ಯತ್ನ

Published

on

ತಿರುವನಂತಪುರಂ: ಕುಟುಂಬದ ಆರು ಮಂದಿಯನ್ನು ಕೊಲೆ ಮಾಡಿ ಜೈಲುಪಾಲಾದ ಕೇರಳದ ಸೈನೈಡ್ ಕಿಲ್ಲರ್ ಜ್ಯೂಲಿ ಕೈ ಕೊಯ್ದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಗುರುವಾರ ನಸುಕಿನ ಜಾವ ಜ್ಯೂಲಿ ಥಾಮಸ್ ತನ್ನ ಕೈ ಕೊಯ್ದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜ್ಯೂಲಿಯ ಈ ಸ್ಥಿತಿ ನೋಡಿದ ಪೊಲೀಸರು ತಕ್ಷಣ ಆಕೆಯನ್ನು ಕೋಯಿಕೋಡ್ ನ ಮೆಡಿಕಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಏನಿದು ಪ್ರಕರಣ?
ಕಳೆದ ವರ್ಷ ಕೇರಳದ ಕೋಯಿಕೋಡ್ ಜಿಲ್ಲೆಯಲ್ಲಿ ಪೊಲೀಸರು ಹಂತಕಿ ಜ್ಯೂಲಿಯ ಜೊತೆಗೆ 2ನೇ ಪತಿ ಹಾಗೂ ಮತ್ತೊಬ್ಬನನ್ನು ಕೂಡ ಪೊಲೀಸರು ಬಂಧಿಸಿದ್ದರು. ಹಂತಕಿ ಜ್ಯೂಲಿ ತನ್ನ ಕುಟುಂಬಸ್ಥರನ್ನು ಕೊಲ್ಲುವುದರ ಜೊತೆಗೆ ಸಂಬಂಧಿ ಮಹಿಳೆಯನ್ನು ಕೊಂದು ಆಕೆಯ ಪತಿಯನ್ನ ಮದುವೆಯಾಗಿದ್ದಳು. ಎರಡು ಕುಟುಂಬಗಳ ಆಸ್ತಿಯನ್ನು ಅನುಭವಿಸಲು ಹಂತಕಿ ಜ್ಯೂಲಿ ಮತ್ತು ಆಕೆಯ ಎರಡನೇ ಗಂಡ ಶಜು 2002ರಿಂದ 2016ರ ಅವಧಿಯಲ್ಲಿ ಕ್ಯಾಥೋಲಿಕ್ ಕುಟುಂಬದ 6 ಮಂದಿಯನ್ನು ಬಲಿಪಡೆದಿದ್ದಾರೆ.

ಹಂತ ಹಂತವಾಗಿ ಕೊಲೆ: 2002ರಿಂದ 2016ರ ಅವಧಿಯಲ್ಲಿ ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಜ್ಯೂಲಿ ಕೊಲೆ ಮಾಡಿದ್ದಳು. ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಅವರ ಸಾವನ್ನ ಸಹಜ ಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು. 2001ರಲ್ಲಿ ದಂಪತಿಯ ಪುತ್ರ ರಾಯ್ ಥಾಮಸ್ (40) ಕೂಡ ಇದೇ ರೀತಿ ಮೃತ ಪಟ್ಟಿದ್ದರು. ಈ ವೇಳೆ ಅವರನ್ನು ವಿಷ ಉಣಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014ರಲ್ಲಿ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

ಎರಡರ ಕಂದಮ್ಮ ಬಲಿ: 2016ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಇತ್ತ ಪತಿ ಮರಣದ ಬಳಿಕ ಪತ್ನಿ ಜ್ಯೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಆಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದರು. ಆದರೆ ಅಮೆರಿಕದಲ್ಲಿ ನೆಲೆಸಿರುವ ಟಾಮ್ ಥಾಮಸ್ ಕಿರಿಯ ಪುತ್ರ ಮೆಜೊ ಆಕ್ಷೇಪಣೆ ಸಲ್ಲಿಸಿ ಕುಟುಂಬ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು.

ಪ್ರಕರಣದ ದಾಖಲಿಸಿ ವಿಚಾರಣೆ ಆರಂಭಿಸಿದ ಅಪರಾಧದಳ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಅಂಶಗಳು ತಿಳಿದು ಬಂದಿದ್ದವು. ಈ ಪ್ರಕರಣ ಕೇರಳದಲ್ಲಿ ಸಂಚಲನವನ್ನು ಉಂಟು ಮಾಡಿತ್ತು. ಪ್ರತಿ ಬಾರಿ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ವೇಳೆ ಜ್ಯೂಲಿ ಸೂಕ್ತ ಪ್ಲಾನ್ ಮಾಡಿ ಯಾರಿಗೂ ಅನುಮಾನಬಾರದಂತೆ ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮೃತ 6 ಮಂದಿ ಸಾವಿನ ವೇಳೆ ಜ್ಯೂಲಿ ಸ್ಥಳದಲ್ಲಿ ಇರುವುದು ಖಚಿತವಾಗಿದೆ. ಈ ಪ್ರಕರಣ ತಮಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಿಕ್ಕಿ ಬಿದ್ದಿದ್ದು ಹೇಗೆ?
ಪ್ರಕರಣವನ್ನು ಬೇದಿಸಲು ಪೊಲೀಸರು ಜೂಲಿ ಹಾಗೂ ಆಕೆಯ 2ನೇ ಪತಿ ಶಾಜುನನ್ನು 8 ಬಾರಿ ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಎಂಟು ಬಾರಿ ವಿಚಾರಣೆಯಲ್ಲಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಲ್ಲದೇ ಜೂಲಿಯ ಫೋನ್ ವಿವರ ಪಡೆದ ವೇಳೆ ಆಕೆ ಶಾಜುನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿತ್ತು. ಅಂದಹಾಗೇ ಜೂಲಿ ವಾಣಿಜ್ಯ ಪದವೀಧರೆಯಾಗಿದ್ದು, ಎಂಜಿನಿಯರಿಂಗ್ ಪದವಿ ಪಡೆದಿದ್ದೇನೆ ಎಂದು ಹೇಳಿ ಕೆಲಸ ಪಡೆದಿದ್ದಳು.

ಕೊಲೆಗೆ ಸೈನೈಡ್ ಬಳಕೆ: ಜೂಲಿ ತನ್ನ ಕುಟುಂಬದ 6 ಮಂದಿಯನ್ನು ಕೊಲೆ ಮಾಡಲು ನಿಧಾನವಾಗಿ ಸಾಯಿಸುವ ಸೈನೈಡನ್ನು ಬಳಕೆ ಮಾಡಿದ್ದಳು. ಮೃತ ದೇಹಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ವೇಳೆ ಮೃತರ ದೇಹದಲ್ಲಿ ವಿಷ ಇರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಖಚಿತವಾಗಿತ್ತು. ಜೂಲಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಆರೋಪದ ಅಡಿ ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಜಿಕುಮಾರ್ ಹಾಗೂ ಎಂಎಸ್ ಮ್ಯಾಥ್ಯೂರನ್ನು ಬಂಧಿಸಿದ್ದಾರೆ.

ಈ ಹಿಂದೆ ವಿಶೇಷ ತನಿಖಾ ತಂಡ(ಎಸ್‍ಐಟಿ) ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾಗ, ಜ್ಯೂಲಿ ಹೆಣ್ಣು ಮಕ್ಕಳನ್ನು ದ್ವೇಷಿಸುತ್ತಾಳೆ ಎನ್ನುವ ಬಗ್ಗೆ ತಿಳಿದುಬಂದಿತ್ತು. ಜ್ಯೂಲಿ ಹೆಣ್ಣು ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಇಟ್ಟುಕೊಂಡಿದ್ದಳು ಎಂದರೆ, ತನ್ನ ಮೊದಲ ಪತಿಯ 2 ವರ್ಷದ ಹೆಣ್ಣು ಮಗುವನ್ನು ಜ್ಯೂಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದಳು. ಅಲ್ಲದೆ ಆಕೆ ಗರ್ಭಿಣಿಯಾಗಿದ್ದಾಗ ತನ್ನ ಹೊಟ್ಟೆಯಲ್ಲಿ ಇರುವುದು ಹೆಣ್ಣು ಮಗು ಎಂದು ತಿಳಿದಾಗ, ಎರಡು ಬಾರಿ ಗರ್ಭಪಾತ ಕೂಡ ಮಾಡಿಸಿಕೊಂಡಿದ್ದಳು ಎಂದು ಎಸ್‍ಐಟಿ ಅಧಿಕಾರಿ ತಿಳಿಸಿದ್ದರು.

Click to comment

Leave a Reply

Your email address will not be published. Required fields are marked *