ಬೆಳಗಾವಿ: ಸಚಿವ ರೋಷನ್ ಬೇಗ್ ಎದೆ ಮೇಲೆ ಕುಳಿತು `ಜೈ ಮಹಾರಾಷ್ಟ್ರ’ ಎಂದು ಬರೆಯುತ್ತೇವೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಬರೆದು ಮತ್ತೆ ತಮ್ಮ ಪುಂಡಾಟಿಕೆಯನ್ನು ಮೆರೆದಿದೆ.
ರೋಷನ್ ಬೇಗ್ ಡಿಎನ್‍ಎ ಪರೀಕ್ಷೆ ಅವಶ್ಯಕತೆ ಇದೆ. ಬೇಗ್ ಮೈಯಲ್ಲಿ ದೇಶಿಯ ರಕ್ತ ಹರಿಯುತ್ತಿಲ್ಲ ಇದು ದೇಶಕ್ಕೆ ಅಪಾಯಕಾರಿಯಾಗಿದೆ. ತಕ್ಷಣ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಬೆಳಗಾವಿಗೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಗಡಿ ಭಾಗದ ಮರಾಠಿಗರ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಇತ್ತ ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಂಡಿದ್ದು, ಯಾವುದೇ ಕಾರಣಕ್ಕೂ ಘೋಷಣೆಗಳನ್ನು ಕೂಗುವ ಹಾಗಿಲ್ಲ. ಶಾಂತಿ ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಬೆಳಗಾವಿ ಕ್ರೈಂ ಡಿಸಿಪಿ ಅಮರನಾಥ್ ರೆಡ್ಡಿ ಎಂಇಎಸ್‍ಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರವನ್ನು ತಲೆ ಕೆಳಗೆ ಕಾಲು ಮೇಲೆ ಮಾಡ್ತೀವಿ: ಕೊಲ್ಲಾಪುರದಲ್ಲಿ ಶಿವಸೇನೆಯಿಂದ ಧಮ್ಕಿ
ಪ್ರತಿಭಟನೆಯಲ್ಲಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸುವಂತಿಲ್ಲ. ಶಾಂತ ರೀತಿಯಲ್ಲಿ ಮನವಿ ಪತ್ರ ಸಲ್ಲಿಸಲು ಎಂಇಎಸ್‍ಗೆ ಅವಕಾಶ ನೀಡಲಾಗಿದೆ. ನಗರದ ಸಂಬಾಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ನಡೆಯಲಿದೆ. ಮುಂಜಾಗೃತ ಕ್ರಮವಾಗಿ ಮಹಾರಾಷ್ಟ್ರ ಗಡಿಯವರೆಗೂ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.
ಬೇಗ್ ವಿರುದ್ಧ ಆಕ್ರೋಶ ಯಾಕೆ?
ಕೆಲವು ದಿನಗಳ ಹಿಂದೆ ಸಚಿವ ರೋಷನ್ ಬೇಗ್, ಎಂಇಎಸ್ ಸಂಘಟನೆಯ ಜಿಲ್ಲಾಪಂಚಾಯತ್ ಸದಸ್ಯರು ನಾಡವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ್ರೆ ಅವರ ಸದಸ್ಯತ್ವವನ್ನು ರದ್ದು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಗೆ ಶಿವಸೇನೆ ಮತ್ತು ಎಂಇಎಸ್ ರೋಷನ್ ಬೇಗ್ ವಿರುದ್ಧ ತಿರುಗಿ ಬಿದ್ದಿವೆ.