ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

Public TV
1 Min Read
Jaggi Jagannatha 3

ಬೆಂಗಳೂರು: ನಿರ್ದೇಶಕ ಓಂ ಸಾಯಿಪ್ರಕಾಶ್ ಅಂದರೆ ಭಾವನೆಗಳನ್ನು ಮೀಟುವಂಥಾ ಕೌಟುಂಬಿಕ ಚಿತ್ರಗಳು, ಭಕ್ತಿಪ್ರಧಾನ ಚಿತ್ರಗಳೇ ಕಣ್ಮುಂದೆ ಬರುತ್ತವೆ. ಅವರು ನಿರ್ದೇಶನ ಮಾಡಿದ ಚಿತ್ರಗಳನ್ನು ನೋಡುತ್ತಾ ಬಂದವರಿಗೆ ಅವರನ್ನು ಮಾಸ್ ಸಿನಿಮಾ ನಿರ್ದೇಶಕರಾಗಿ ಕಲ್ಪಿಕೊಳ್ಳುವುದೂ ಕಷ್ಟವಾಗಬಹುದು. ಆದರೀಗ ಸಾಕ್ಷಾತ್ತು ಸಾಯಿಪ್ರಕಾಶ್ ಜಗ್ಗಿ ಜಗನ್ನಾಥ ಎಂಬ ಪಕ್ಕಾ ಆಕ್ಷನ್ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಪೂರೈಸಿಕೊಂಡಿರೋ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

Jaggi Jagannatha 8

ಈ ಚಿತ್ರದಲ್ಲಿ ಲಿಖಿತ್ ಎಂಬ ಹೊಸ ಹುಡುಗ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ತಮ್ಮ ಬ್ರ್ಯಾಂಡಿನಂತಿರೋ ಖಡಕ್ ಪೊಲೀಸ್ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಈಗ ಹೊರಬಂದಿರೋ ಟ್ರೇಲರ್‍ನಲ್ಲಿ ಅವರ ಪಾತ್ರವೇ ಹೈಲೈಟ್ ಆಗಿದೆ. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರಿನ ಡೈಲಾಗುಗಳೊಂದಿಗೆ ಗಮನ ಸೆಳೆದಿದ್ದಾರೆ. ಇಲ್ಲಿನ ಮೈನವಿರೇಳಿಸೋ ಮಾಸ್ ಸೂಚನೆಗಳು ಇದು ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಾ ಎಂಬಂಥಾ ಸಂಶಯ ಹುಟ್ಟುವಷ್ಟು ಆಕ್ಷನ್ ಅಂಶಗಳನ್ನೊಳಗೊಂಡಿದೆ.

Jaggi Jagannatha 4

ಪೆಟ್ರೋಲ್ ಪ್ರಸನ್ನ ಈ ಹಿಂದೆ ದಂಡುಪಾಳ್ಯಂ ಸರಣಿಯಲ್ಲಿ ಒಂದಷ್ಟು ಸದ್ದು ಮಾಡಿದ್ದರು. ಜಗ್ಗಿ ಜಗನ್ನಾಥ ಚಿತ್ರದಲ್ಲಿ ಅವರು ಮತ್ತೆ ವಿಲನ್ ರೋಲ್‍ನಲ್ಲಿ ಅಬ್ಬರಿಸಿದ್ದಾರೆ. ಈ ಕಥಾ ಹಂದರವೂ ವಿಶೇಷವಾಗಿಯೇ ಇದೆಯಂತೆ. ಸಾಮಾನ್ಯರಲ್ಲಿ ಸಾಮಾನ್ಯನಾದ ಹುಡುಗನೊಬ್ಬ ಅಘೋರಿಯ ಅವತಾರವೆತ್ತುವ ಅಪರೂಪದ ಸನ್ನಿವೇಶವೂ ಇಲ್ಲಿದೆಯಂತೆ. ಮಾಫಿಯಾ, ರೌಡಿಸಂ ಮತ್ತು ಅದನ್ನು ಬಗ್ಗುಬಡಿಯಲು ನಿಂತ ಖಡಕ್ ಖಾಕಿಯ ಸುತ್ತಾ ಈ ಕಥೆ ರೋಚಕವಾಗಿ ಚಲಿಸುತ್ತದೆಯಂತೆ. ಇದೆಲ್ಲದರ ಜೊತೆಗೆ ಮನಮಿಡಿಯೋ ಪ್ರೇಮಕಥೆಯನ್ನೂ ಹೊಂದಿರುವ ಈ ಚಿತ್ರವೀಗ ಟ್ರೇಲರ್ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಇಷ್ಟರಲ್ಲಿಯೇ ಇದರ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *