ಮೈಸೂರು: ನವರಸನಾಯಕ ಜಗ್ಗೇಶ್ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೈಸೂರು ಸುತ್ತಿದ್ದಾರೆ.
ಜಗ್ಗೇಶ್ ಅವರು ಕುದುರೆ ಟಾಂಗಾ ಗಾಡಿಯಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೈಸೂರು ರೌಂಡ್ಸ್ ಹಾಕಿದ್ದಾರೆ. ಸಾರ್ವಜನಿಕರಿಗೆ ತಿಳಿಯದಂತೆ ಮೈಸೂರು ನಗರ ಸಂಚಾರ ಮಾಡಿ ಇಲ್ಲಿ ಕಳೆದ ನೆನಪುಗಳ ಮೆಲಕು ಹಾಕಿದ್ದಾರೆ. ಮೈಸೂರಿನ ಕೆ.ಆರ್ ಸರ್ಕಲ್ ಮುಖಾಂತರ ಟಾಂಗಾ ಗಾಡಿ ಏರಿ ಸಾಗಿದ ಜಗ್ಗೇಶ್, ನಂತರ ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದುಕೊಂಡು ಸುತ್ತಾಡಿದ್ದಾರೆ.
ಈ ಬಗ್ಗೆ ಜಗ್ಗೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಸುತ್ತುತ್ತಿರುವ ವಿಡಿಯೋ ಹಾಕಿ ಅದಕ್ಕೆ, “ಸಣ್ಣ ಸಣ್ಣ ವಿಷಯವು ನಮಗೆ ಸಂತೋಷ ನೀಡುತ್ತದೆ. ಆ ಸಂತೋಷ ನಾವೇ ಹುಡುಕಬೇಕು. ಸಾಮಾನ್ಯನಿಗೆ ಸುಪತ್ತಿಗೆಯ ಆಸೆ. ಸುಪತ್ತಿಗೆಯವನಿಗೆ ಸಾಮಾನ್ಯ ಆಸೆ ಬಯಕೆ. ಜೀವನ ತುಂಬಾ ಸುಂದರವಾಗಿದೆ. ಅದನ್ನು ಎಂಜಾಯ್ ಮಾಡಿ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೇ ಇರಲಿ. ಇದು ನನ್ನ ಪಾಲಿಸಿ” ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಮತ್ತೊಂದು ವಿಡಿಯೋ ಹಾಕಿ ಅದಕ್ಕೆ, “ಏನು ಮಜಾ ಮೈಸೂರು ಟಾಂಗಾ. ಬಾಲ್ಯದಲ್ಲಿ ರಾಜಣ್ಣನ ಸಿನಿಮಾ ನೋಡಲು ಅಮ್ಮನ ಜೊತೆ ಶ್ರೀರಾಮಪುರದಿಂದ ನವರಂಗ ಚಿತ್ರಮಂದಿರಕ್ಕೆ ಹೋಗಿ ಕೃಷ್ಣದೇವರಾಯ ಚಿತ್ರ ನೋಡಿದ ನೆನಪು ಕಾಡಿತು. ಮಕ್ಕಳಂತೆ ದೊಡ್ಡವರ ತನಗಳ ಬಿಟ್ಟು ಬದುಕಿದರೆ ನಾವು ಮಕ್ಕಳಂತೆ ಸಂತೋಷವಾಗಿ ಬದುಕಬಹುದು. ಜೀವನ ತುಂಬಾ ಸುಂದರವಾಗಿದೆ. ಯಾವಾಗಲೂ ಖುಷಿಯಾಗಿರಿ” ಎಂದು ಪೋಸ್ಟ್ ಮಾಡಿದ್ದಾರೆ.