ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು: ಜಗ್ಗೇಶ್ ಕಿಡಿ

Public TV
3 Min Read
jaggesh 3

-ಚಾಲೆಂಜ್ ಸ್ವೀಕರಿಸಿ ಗೆದ್ದರೆ ನಾನು ನಿಮ್ಮ ದಾಸ
-ಫೇಕ್ ಐಡಿ ಆಗದಿರಿ ಪ್ಲೀಸ್

ಬೆಂಗಳೂರು: ನಾನು ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು. ನಾನು ಯಾವುದನ್ನು ಹುಡುಕಿಕೊಂಡು ಹೋದ ವ್ಯಕ್ತಿ ಅಲ್ಲ ಎಂದು ನವರಸನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕದಲ್ಲಿ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನಟ ಜಗ್ಗೇಶ್ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿತಯುವ ಇಂಗಿತವನ್ನು ಮಾರ್ಮಿಕವಾಗಿಯೇ ಹೊರ ಹಾಕಿದ್ದರು. ಈ ಹಿಂದೆಯೂ ನಾನು 9 ದಿನದಲ್ಲಿ 64 ಸಾವಿರ ಮತಗಳನ್ನು ಪಡೆದಿದ್ದೇನೆ. ಈ ಬಾರಿಯ ಉಪಚುನಾವಣೆಗೆ ಸ್ಪರ್ಧಿಸಬೇಕಾ ಅಥವಾ ತ್ಯಾಗ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದರು. ಇಂದು ಮತ್ತೊಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಜಗ್ಗೇಶ್ ಟ್ವೀಟ್:
ಪ್ರತಿಯೊಬ್ಬರಿಗೂ ಅವರ ಭಾವನೆ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಹಂಚಿಕೊಂಡಿದ್ದೇನೆ ಅಷ್ಟೆ. ಎಲ್ಲೋ ಇದ್ದ ಅನ್ಯ ಪಕ್ಷದ ಫೇಕ್ ಐಡಿಗಳೆಲ್ಲ ದಿಢೀರ್ ಅಂತ ಹುಡುಕಿ ಬಂದು ನನ್ನ ಪೇಜ್ ಮೇಲೆ ವಾಂತಿ ಮಾಡಿದರು. ನೆನಪಿಡಿ ನಾನು ಜಗ್ಗೇಶ್ ರಾಯರ ಮಗ. ನನಗೆ ಬೇಕಾದ್ದು ನನ್ನ ಹುಡುಕಿ ಬರುತ್ತದೆ. ಶ್ರೀರಾಮಪುರದ ಫುಟ್ ಪಾತ್‍ನಿಂದ ಇಲ್ಲಿಯವರೆಗು ಬಂದವ ನಾನು ಎಂದು ವಿರೋಧಿಗಳಿಗೆ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಒಬ್ಬರಿಗೆ ಹಂಗಿಸುವ ಮುನ್ನ ನನ್ನ ಚಾಲೆಂಜ್ ಸ್ವೀಕರಿಸಿ. ಹಂಗಿಸುವ ಮುನ್ನ ನಿಮ್ಮ ಬದುಕಲ್ಲಿ 1 ಗಂಟೆ ಯಾರ ನೀವು ಅಣಕಿಸುತ್ತೀರಿ ಅಂತವರು ಮಾಡಿದಷ್ಟು ಸಾಧನೆ ನಿಮ್ಮ ಬದುಕಲ್ಲಿ ಸಾಧಿಸಿ ತೋರಿಸಿ. ಹಾಗೆ ನೀವು ಸಾಧಿಸಿದರೆ ನಾನು ನಿಮ್ಮ ದಾಸ. ಆಗದಿದ್ದರೆ ನಿಮ್ಮ ಅನ್ನಕ್ಕೆ ದಾರಿ ಹುಡುಕಿ ಬದುಕಿ ತಂದೆ-ತಾಯಿ ಜೊತೆ ಸಂತೋಷವಾಗಿ ಬಾಳಿ. ಫೇಕ್ ಐಡಿ ಆಗದಿರಿ ಪ್ಲೀಸ್.

ನನ್ನ ಬದುಕಲ್ಲಿ ಕಂಡಿರುವಷ್ಟು ಕಷ್ಟ-ಸುಖ, ಏಳು-ಬೀಳು, ಅಪಮಾನ, ಸನ್ಮಾನ, ನಂಬಿಕೆ ದ್ರೋಹ ಬೆನ್ನಿಗೆ ಚೂರಿ ಹಾಕಿಸಿಕೊಂಡರು ಯಾರಿಗು ಅರಿವಾಗದಂತೆ ಒಳಗೊಳಗೆ ನೋವುಂಡು ಅನ್ಯರ ನಗಿಸಿ 57ರ ಗಡಿಗೆ ಬೇಕಾದ್ದು ರಾಯರ ದಯೆಯಿಂದ ಪಡೆದು ದಡ ಸೇರಿರುವೆ. ಬಹುತೇಕರು ನನ್ನ ಮಕ್ಕಳ ವಯಸ್ಕರರು. ನೀವಂದುಕೊಂಡಷ್ಟು ಸುಲಭವಲ್ಲ ಬದುಕು. ನಾನು ಇಷ್ಟು ಮಾತ್ರ ಹೇಳಲು ಸಮರ್ಥ.

ರಾಯರ ಭಕ್ತರು ಸ್ವಾಭಿಮಾನಿಗಳು, ರಾಯರೇ ಭಕ್ತರ ಬೆನ್ನಿಗೆ ಇರಬೇಕಾದರೆ ಭಿಕ್ಷೆ ಬೇಡುವುದಿಲ್ಲ ಮತ್ತು ತಲೆ ಬಾಗುವುದಿಲ್ಲ. ಆಟೋ ಬೇಕು ಎಂದ ನನ್ನಂಥ ಪಾಮರನಿಗೆ ಜಗಮೆಚ್ಚಿದ ಮಗನ ಮಾಡಿದ್ದಾರೆ. ಅಧಿಕಾರ ದುಡ್ಡು ಮಿತ್ಯ, ರಾಯರು ಸತ್ಯ. ವರ್ಷಾನುಗಟ್ಟಲೆ ನನ್ನ ಅಣಕಿಸಿದವರ ಮುಂದೆ ರಾಯರು ನನಗೆ ಬೇಕಾದ್ದು ಕೊಟ್ಟು ಹರಸಿದ್ದಾರೆ. ರವಿಚಂದ್ರನ್ ಕಂಪನಿಯಲ್ಲಿ 1987ರಲ್ಲಿ 18 ರೂ.ಗೆ ಕೂಲಿ ಮಾಡುತ್ತಿದ್ದ ನಾನು ಇಂದು ವರ್ಷಕ್ಕೆ 20 ಲಕ್ಷ ರೂ. ತೆರಿಗೆ ಕಟ್ಟುವ ಶಕ್ತಿ ನೀಡಿರುವ ರಾಯರು ಹಾಗೂ ನನ್ನ ಪ್ರೀತಿಸುವ ಕನ್ನಡಿಗರೆ ಸಾಕು. ಬದುಕಿದ್ದಾಗಲೆ ಈ ಹಳ್ಳಿ ಹುಡುಗನ ಕಥೆ ಬದುಕುವ ಛಲದವರಿಗೆ ಮಾರ್ಗದರ್ಶನವಾಗಲಿ. ನಾನು ಸತ್ತಾಗ ಹೊಗಳಬೇಡಿ ಬದುಕಿದ್ದಾಗ ಅನುಸರಿಸಿ ಸಾಕು. ಶುಭರಾತ್ರಿ

ಶನಿವಾರ ಜಗ್ಗೇಶ್ ಚುನಾವಣೆ ಕುರಿತು ತಮ್ಮ ಭಾವನೆಗಳನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜಗ್ಗೇಶ್ ಟ್ವೀಟ್‍ಗೆ ಕಮೆಂಟ್ ಪರ-ವಿರೋಧ ಅಭಿಪ್ರಾಯಗಳು ಸಹ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಎಲ್ಲ ಕಮೆಂಟ್ ಗಳಿಗೆ ಉತ್ತರ ನೀಡಿದ್ದಾರೆ.

ಶನಿವಾರದ ಟ್ವೀಟ್:
ಬೈ ಎಲೆಕ್ಷನ್ ಬಂತು. 2018ರಲ್ಲಿ ಕಡೆಗಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು. ಮೌನವಾಗಿ ಇರಲೋ? ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ ಎಂದು ಬರೆದುಕೊಂಡಿದ್ದರು.

ಜಗ್ಗೇಶ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ 59,308 ಮತಗಳನ್ನು ಪಡೆದು ಸೋತಿದ್ದರು. ಈ ವೇಳೆ ಭರ್ಜರಿ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ.ಸೋಮಶೇರ್ 1,15,273 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಜೆಡಿಎಸ್‍ನ ಅಭ್ಯರ್ಥಿ 1,04,562 ಮತಗಳನ್ನು ಗಳಿಸಿ ಪರಾಭವಗೊಂಡಿದ್ದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *