ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಇರುವುದು ಬರೀ ಐದು ಜನ ಹೀರೋಗಳಷ್ಟೇನಾ? ಯಾರೇ ಉತ್ತಮ ಸಿನಿಮಾ ಮಾಡಿದರೂ ಪ್ರೇಕ್ಷಕರು ಅವರ ಕೈಹಿಡಿಯಬೇಕು. ಚೆಂದಗೆ ಸಿನಿಮಾ ಮಾಡಿದವರಿಗೆ ಬೆನ್ನು ತಟ್ಟಬೇಕು. ನನಗಿದ್ದ ಕ್ವಾಲಿಟಿಗೆ ನನ್ನನ್ನು ಯಾರು ತಾನೆ ಹೀರೋ ಮಾಡಲು ಬರುವಂತಿತ್ತು? ನಾನು ಧೈರ್ಯ ಮಾಡಿ ನನ್ನ ಭಾವನ ಜೊತೆ ಸೇರಿ ಭಂಡ ನನ್ನ ಗಂಡ ಸಿನಿಮಾ ಮಾಡಿದೆ. ಸಿನಿಮಾವನ್ನು ಜನ ಕೈ ಹಿಡಿದರು. ಇವತ್ತು ನಾನು ಮುಂದಿನ ಪೀಳಿಗೆಗೆ ಒಂದಿಷ್ಟು ಸಲಹೆ ನೀಡಲಿಕ್ಕಾದರೂ ಕೂರುವಂತಾಗಿದೆ. ನಮ್ಮ ನೆಲದಲ್ಲಿ ಅದ್ಭುತ ಪ್ರತಿಭೆಗಳಿವೆ. ಹೊಸಬರ ಕೈ ಹಿಡಿದರೆ ಅವರೂ ಮುಂದೊಂದು ದಿನ ತಮ್ಮ ಮುಂದಿನ ಪೀಳಿಗೆಗೆ ಒಂದಿಷ್ಟು ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಆಂಧ್ರದಲ್ಲಿ ನೋಡಿದರೆ ನಾಲ್ಕು ಜನ, ತಮಿಳುನಾಡಿನಲ್ಲೂ ನಾಲ್ಕೇ ಜನ, ಕೇರಳಕ್ಕೆ ಹೋದರೆ ಅಲ್ಲಿ ಮೂರು ಮತ್ತೊಂದು ಜನರೇ ಚಿತ್ರರಂಗದಲ್ಲಿ ಆಳ್ವಿಕೆ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಐದು ಜನ ಹೀರೋಗಳನ್ನೇ ಹಿಡಿದುಕೊಂಡು ಜಗ್ಗಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂದೆ ಬೇರೆಯವರನ್ನೂ ಪ್ರೋತ್ಸಾಹಿಸಿ…’ ಇದು ನವರಸ ನಾಯಕ ಜಗ್ಗೇಶ್ ನುಡಿಗಳು.
Advertisement
ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಜಗ್ಗೇಶ್ ಅವರನ್ನು ಹೊರತುಪಡಿಸಿದರೆ ಮಿಕ್ಕವರೆಲ್ಲರೂ ಬಹುತೇಕ ನವ ಪ್ರತಿಭೆಗಳು. ಈ ಚಿತ್ರದಲ್ಲಿ ಹೊಸ ಕಲಾವಿದರ ಜೊತೆಗೆ ಅಭಿನಯಿಸಿದ್ದು ಜಗ್ಗೇಶ್ ಅವರಿಗೆ ಮತ್ತಷ್ಟು ಹುರುಪು ತುಂಬಿದೆಯಂತೆ. ಶೃತಿ ನಾಯ್ಡು ನಿರ್ಮಾಣದ, ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ ಇದೇ ತಿಂಗಳು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಾದ ಮಧುಬಾಲಾ ಮತ್ತು ಸುಧಾರಾಣಿ ಕೂಡಾ ನಟಿಸಿದ್ದಾರೆ.
Advertisement
https://twitter.com/premierpadmini/status/1100342311660093440