9 ವರ್ಷದ ಹಿಂದೆ ನಡೆದಿದ್ದ ಮನಕಲಕುವ ಘಟನೆ ತಿಳಿಸಿ ಜಗ್ಗೇಶ್ ಮನವಿ

Public TV
2 Min Read
JAGGESH 1

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳ ಬಳಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 9 ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ತಿಳಿಸಿದ್ದಾರೆ.

ನಟ ಜಗ್ಗೇಶ್ ಫೇಸ್‍ಬುಕ್‍ನಲ್ಲಿ ‘ಜೊತೆ ಇರುವವರು ನಮ್ಮವರಲ್ಲಾ..ಯಾರು ನಮ್ಮ ಜೊತೆ ಇರುತ್ತಾರೆ ಅವರೇ ನಮ್ಮವರು. ಈ ಮಾತುಗಳನ್ನು ಹೇಳೋದಕ್ಕೆ ಕಾರಣ 2010ರ ಆಸುಪಾಸು ನಡೆದ ಒಂದು ಘಟನೆ” ಎಂದು 9 ವರ್ಷಗಳ ಹಿಂದೆ ನಡೆದಿದ್ದ ಒಂದು ಸಂದರ್ಭವನ್ನು ಸಂಪೂರ್ಣವಾಗಿ ಬರೆದು ತಿಳಿಸಿದ್ದಾರೆ.

60934167 1091760617676957 6637071756316114944 n

ನಡೆದ ಘಟನೆ:
ಆರ್.ಅಶೋಕ್ ಸಾರಿಗೆ ಮಂತ್ರಿ, ಆಗ ನಾನು ಕೆಎಸ್‍ಆರ್ ಟಿಸಿ ಉಪಾಧ್ಷಕನಾಗಿದ್ದೆ. ಒಂದು ದಿನ ಕಾರ್ಯ ನಿಮಿತ್ತ ಅಶೋಕ್ ಅವರನ್ನು ಬೆಂಗಳೂರು ರೈಲು ನಿಲ್ದಾಣದಲ್ಲಿ ರಾತ್ರಿ 10ಕ್ಕೆ ರೈಲು ಹತ್ತಿಸಿ ವಾಪಸ್ ಹೊರಡುವಾಗ ರೈಲು ಹಳಿಯಿಂದ ಯಾರೋ ಚೀರುತ್ತಿದ್ದು ಕೇಳಿತು. ಗಾಬರಿಯಿಂದ ಬಗ್ಗಿ ನೋಡಿದಾಗ ತುಂಡಾದ ಕಾಲು ನಿತ್ರಾಣಗೊಂಡ ವ್ಯಕ್ತಿ ಪತ್ತೆಯಾದರು. ಅಷ್ಟೇ ಅಲ್ಲದೇ ತಲೆ ರೈಲು ಚಕ್ರಗಳ ಮದ್ಯ ಸಿಕ್ಕಿಹಾಕಿಕೊಂಡಿತ್ತು. ರೈಲು ಚಲಿಸಲು ಹಾರನ್ ಸೂಚನೆ ಕೊಟ್ಟಿತ್ತು. ಕೂಡಲೆ ನನ್ನ ಪಿಎ ರಾಮಲಿಂಗಯ್ಯನಿಗೆ ರೈಲು ನಿಲ್ಲಿಸಲು ಹೇಳಿದೆ. ಆತ ಇಂಜಿನ್ ಮುಂದೆ ನಿಂತೆಬಿಟ್ಟ. ನಾನು ನನ್ನ ಗನ್ ಮ್ಯಾನ್ ರಾಘವೇಂದ್ರ ಅಡಿ ನುಗ್ಗಿ ಅವನ ಮೇಲೆ ಎಳೆದೆವು. ತುಂಡಾದ ಕಾಲುಗಳು ರಕ್ತಸ್ರಾವ ಮಾತಾಡಲು ಆಗದೆ ಜೀವಹೋಗುತ್ತಿತ್ತು ಎಂದರು.

ದುಃಖ ತಾಳಲಾಗದೆ ಮೃತ್ಯುಂಜಯ ಜಪಮಾಡುತ್ತಾ ಅಂಬುಲೆನ್ಸ್ ತರಿಸಿದ್ದೆ. ಬೋರಿಂಗ್ ಆಸ್ಪತ್ರೆ ಮುಖ್ಯಸ್ಥರು ನನ್ನ ಆತ್ಮೀಯ ಡಾ.ತಿಲಕ್ ಅವರಿಗೆ ಕರೆ ಮಾಡಿ ಆದ ಘಟನೆ ತಿಳಿಸಿ ಎಲ್ಲಾ ಚಿಕಿತ್ಸೆಗೆ ತಯಾರಾಗಿರಲು ತಿಳಿಸಿದ್ದೆ. ಸಮಯಕ್ಕೆ ಸರಿಯಾಗಿ ಇವನನ್ನ ಅವರ ಕೈಯಲ್ಲಿ ಒಪ್ಪಿಸಿದೆ. ಸಾಕ್ಷಾತ್ ಶಿವನಂತೆ ಡಾ.ತಿಲಕ್ ಆ ವ್ಯಕ್ತಿಯ ಅಳಿದುಳಿದ ಮಾಂಸ ಖಂಡ ಶಸ್ತ್ರಚಿಕಿತ್ಸೆ ಮಾಡಿ ಉಳಿಸಿಬಿಟ್ಟರು. 6 ತಿಂಗಳ ನಂತರ ಕೃತಕ ಕಾಲು ಹಾಕಿಸಿ ಇವನ ನಡೆಸಿ ನೋಡಿ ಆನಂದಪಟ್ಟು ಈ ಕಾರ್ಯ ಮಾಡಲು ಶಕ್ತಿ ಕೊಟ್ಟ ದೇವರಿಗೆ ಧನ್ಯವಾದ ಅರ್ಪಿಸಿದೆ ಎಂದಿದ್ದಾರೆ.

ಅಲ್ಲಿಂದ ಇಲ್ಲಿಯವರೆಗೂ ಆ ವ್ಯಕ್ತಿಯ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವೆ. ಅವನು ನನ್ನ ಕಂಡಾಗ ಹೇಳುವುದು ಒಂದೆ ‘ಅಮ್ಮ ನನಗೆ ಫೋಟೋದ ದೇವರ ಪೂಜಿಸಲು ಹೇಳಿಕೊಟ್ಟಳು. ನನ್ನ ಬದುಕಿಸಿದ ಮೇಲೆ ನಿಮ್ಮಲ್ಲಿ ಆ ದೇವರ ಕಾಣುವೆ ಎನ್ನುತ್ತಾನೆ’ ಶಕ್ತಿಮೀರಿ 8 ವರ್ಷದಿಂದ ಸಹಾಯ ಮಾಡುತ್ತಿರುವೆ ಎಂದು ತಿಳಿಸಿದ್ದಾರೆ.

ಈ ಕಥೆ ಕೇಳಿದ ನಿಮಗೆ ಬಡಪಾಯಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಲು ರಾಯರು ಮನಸ್ಸು ಕೊಟ್ಟರೆ ದಯಮಾಡಿ ಕೈಲಾದಷ್ಟು ಇವನಿಗೆ ಸಹಾಯಮಾಡಿ ಎಂದು ವಿನಂತಿ ಮಾಡಿಕೊಂಡಿದ್ದು, ಇವನ ಮಗ ವಿಜಯ್ ಕುಮಾರ್ ಬಹಳ ಪ್ರತಿಭಾವಂತ. ದೂರವಾಣಿ ಸಂಖ್ಯೆ 8861123498 ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *