ಬೆಂಗಳೂರು: ನವರಸ ನಾಯಕ ಜಗ್ಗೇಶ್ ಮತ್ತು ‘ಮಠ’ ಚಿತ್ರದ ಖ್ಯಾತಿಯ ಗುರುಪ್ರಸಾದ್ ಜೋಡಿಯಲ್ಲಿ ಮೂರನೇ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರಕ್ಕಾಗಿ ನಾಯಕಿಯರ ಆಯ್ಕೆ ಪ್ರಕ್ರಿಯೆ ಜೋರಾಗಿಯೇ ನಡೆದಿದೆ.
ಜಗ್ಗೇಶ್ ಹಾಗೂ ಗುರುಪ್ರಸಾದ್ ಅವರ ಕಾಂಬಿನೇಶನ್‍ನ ಚಿತ್ರಕ್ಕೆ ‘ರಂಗನಾಯಕ’ ಎಂದು ಹೆಸರಿಡಲಾಗಿದೆ. ಸಿನಿಮಾಗೆ ಚಾಲನೆ ನೀಡಿ ಐದು ತಿಂಗಳೇ ಕಳೆದಿದೆ. ಆದರೂ ಚಿತ್ರದ ಕುರಿತು ಯಾವುದೇ ಸುದ್ದಿ ಹೊರ ಬಿದ್ದಿರಲಿಲ್ಲ. ಇತ್ತೀಚೆಗಷ್ಟೇ ಏಪ್ರಿಲ್ 2ರಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ಚಿತ್ರ ತಂಡ ಹೇಳಿಕೊಂಡಿತ್ತು. ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಶೂಟಿಂಗ್ ನಡೆಸುವುದು ಸಾಧ್ಯವಿಲ್ಲ ಎನ್ನುವಂತಾಗಿದೆ.
ಚಿತ್ರದ ಟೀಸರ್ ಬಿಡುಗಡೆಯ ಬಳಿಕ ಮತ್ತೆ ಸಿನಿಮಾದ ಸುದ್ದಿಯೇ ಇರಲಿಲ್ಲ. ಏಪ್ರಿಲ್ 2ರಿಂದ ಚಿತ್ರೀಕರಣ ಆರಂಭಿಸುವ ಕುರಿತು ಚಿತ್ರತಂಡ ಮಾಹಿತಿ ನೀಡಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ‘ರಂಗನಾಯಕ’ನ ಶೂಟಿಂಗ್ ಆರಂಭವಾಗುವುದು ಕಷ್ಟ. ಎರಡು ಯಶಸ್ವಿ ಸಿನಿಮಾಗಳ ಬಳಿಕ ದೂರವಾಗಿದ್ದ ಈ ಜೋಡಿ ಮತ್ತೆ ಒಂದಾಗುತ್ತಿದೆ. ಇದೆಲ್ಲದರ ಮಧ್ಯೆ ರಂಗನಾಯಕನಿಗೆ ನಾಯಕಿಯನ್ನು ಆಯ್ಕೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ಮೂಲಗಳ ಪ್ರಕಾರ ರಾಧಿಕಾ ಕುಮಾರಸ್ವಾಮಿಯವರು ಚಿತ್ರತಂಡವನ್ನು ಸೇರಲಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಲು ರಾಧಿಕಾ ಕುಮಾರಸ್ವಾಮಿಯವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಾಗಿದೆ. ಆದರೆ ಚಿತ್ರತಂಡ ಈ ಕುರಿತು ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.
ಇನ್ನೊಂದೆಡೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹೆಸರೂ ಸಹ ಕೇಳಿ ಬಂದಿದ್ದು, ಚಿತ್ರದಲ್ಲಿ ಇಬ್ಬರು ನಾಯಕಿಯರು ಇರುತ್ತಾರಾ, ಒಬ್ಬರೇನಾ ಎಂಬುದು ಸ್ಪಷ್ಟವಾಗಿಲ್ಲ. ನಾಯಕಿಯರ ಆಯ್ಕೆಯ ವಿಚಾರದಲ್ಲಿ ಚರ್ಚೆ ನಡೆದಿದ್ದು, ರಾಧಿಕಾ ಅಥವಾ ರಚಿತಾ ರಾಮ್ ಇಲ್ಲವೆ ಹೊಸಬರನ್ನು ಆಯ್ಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆಯಂತೆ. ಚಿತ್ರೀಕರಣ ಆರಂಭವಾಗಲು ಇನ್ನೂ ಸಮಯವಿದ್ದು, ಅಷ್ಟರೊಳಗೆ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಚಿತ್ರತಂಡ ಚಿಂತಿಸಿದೆ.
ನವರಸ ನಾಯಕ ಜಗ್ಗೇಶ್ ಸದ್ಯ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದು ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಒಂದೇ ಬಾರಿಗೆ ಎರಡೂ ಭಾಗಗಳನ್ನು ಚಿತ್ರೀಕರಿಸುತ್ತಿರುವುದು ಈ ಸಿನಿಮಾದ ವಿಶೇಷತೆ. ‘ತೊಟ್ಟು ಕೀಳ್ಬೇಕು’ ಎನ್ನುವುದು ಮೊದಲ ಭಾಗದ ಶೀರ್ಷಿಕೆಯಾದರೆ, ತೊಟ್ಟು ಕಿತ್ತಾಯ್ತು ಎನ್ನುವುದು ಎರಡನೇ ಭಾಗದ ಶೀರ್ಷಿಕೆಯಾಗಿದೆ. ಟೈಟಲ್ ಮೂಲಕವೇ ಈ ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.
ಇತ್ತ ರಾಧಿಕಾ ತಮ್ಮ ಬಹುನಿರೀಕ್ಷಿತ ‘ಭೈರಾದೇವಿ’ ಚಿತ್ರದ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ದುನಿಯಾ ವಿಜಯ್, ರಮೇಶ್ ಅರವಿಂದ್ ಕೂಡ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಜೈ ನಿರ್ದೇಶನದ ಈ ಚಿತ್ರವನ್ನು ಕನ್ನಡವಲ್ಲದೆ, ತಮಿಳು ಹಾಗೂ ತೆಲುಗಿನಲ್ಲಿಯೂ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.