Connect with us

ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

ಕಾರವಾರ: ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗದ ಬೆಲ್ಲ ಉತ್ಪಾದಕರಿಗೆ ಬಂಪರ್ ಲಾಟರಿ ಹೊಡೆದಿದೆ. ಸದಾ ದರ ಇಳಿತದಿಂದ ಕಂಗಾಲಾಗಿದ್ದ ಬೆಲ್ಲ ಉತ್ಪಾದಕರಿಗೆ ಈ ಬಾರಿ ಬಹು ಬೇಡಿಕೆ ಬಂದಿದ್ದು, ಉತ್ಪಾದಕರ ಮೊಗದಲ್ಲಿ ಸಿಹಿ ನಗುವನ್ನು ಮೂಡಿಸಿದೆ.

ಹೌದು. ಕಳೆದ ಬಾರಿ 25 ಕೆಜಿ ಡಬ್ಬದ ಬೆಲ್ಲಕ್ಕೆ 500 ರಿಂದ 800 ರೂಪಾಯಿ ಕನಿಷ್ಠ ದರ ನಿಗದಿಯಾಗಿತ್ತು. ಹೀಗಾಗಿ ಕಷ್ಟಪಟ್ಟು ಬೆಳದ ರೈತರು ಲಾಭ ಸಿಗದೆ ಅಲ್ಪ ಮಟ್ಟಕ್ಕೆ ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ರು. ಆದರೆ ಈಗ 25 ಕೆಜಿ ಬೆಲ್ಲಕ್ಕೆ 2 ಸಾವಿರ ರೂ. ಏರಿಕೆಯಾಗಿದ್ದು, 2600 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಸದರಿ ಮಾರುಕಟ್ಟೆಯಲ್ಲಿ ಸಿಗುವ 25 ಕೆಜಿ ಅಚ್ಚಿನ ಬೆಲ್ಲ 1200 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ಡಬ್ಬದ ಬೆಲ್ಲಕ್ಕೆ ಮಾತ್ರ ಶುಕ್ರದೆಸೆ ತಿರುಗಿದೆ.

ಬೆಲೆ ಏರಿಕೆಯಾಗಿದ್ದು ಯಾಕೆ?
ಕಬ್ಬು ಕಟಾವು ಮಾಡಲು ಒಬ್ಬ ಕೆಲಸಗಾರನಿಗೆ 500 ರೂ. ಕೂಲಿ ನೀಡಬೇಕು. ಇಷ್ಟು ಕೂಲಿ ನೀಡಿದರೂ ಕೆಲಸ ಮಾಡಲು ಕೆಲಸಗಾರರು ಸಿಗುತ್ತಿಲ್ಲ. ಜೊತೆಗೆ ಕಬ್ಬನ್ನು ಅರೆಯಲು ಗಾಣ ಮುಂತಾದ ಕೆಲಸಗಳಿಗೆ ಪ್ರತಿ 25 ಕೆ.ಜಿ. ಡಬ್ಬಕ್ಕೆ 1300 ರೂಪಾಯಿ ತಗಲುತ್ತದೆ. ಅಷ್ಟೇ ಅಲ್ಲದೇ ಬೆಲ್ಲ ತಯಾರಿಸಲು ಲೋಡ್ ಗಟ್ಟಲೆ ಕಟ್ಟಿಗೆ ಬೇಕಾಗುತ್ತದೆ. ಈ ಕಟ್ಟಿಗೆ ಹೊಂದಿಸುವುದೇ ರೈತನಿಗೊಂದು ದೊಡ್ಡ ತಲೆನೋವು. ಹೀಗಾಗಿ ಮೈತುಂಬ ಕೆಲಸವಿರುವ ಈ ಬೆಲ್ಲ ಉತ್ಪಾದನೆಗೆ ಮಲೆನಾಡಿನ ರೈತರು ಮನಸ್ಸು ಮಾಡುತ್ತಿಲ್ಲ. ಇನ್ನು ಈ ಬಾರಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಮಳೆ ಸುರಿದಿದ್ದು ಕಬ್ಬು ಬೆಳೆ ನಷ್ಟವಾಗಿ ಹೋಗಿದೆ. ಈ ಎಲ್ಲ ಕಾರಣದಿಂದಾಗಿ ಬೆಲ್ಲದ ಬೆಲೆಯಲ್ಲಿ ಏರಿಕೆಯಾಗಿದೆ.

ಮಲೆನಾಡಿನ ಬೆಲ್ಲ ಹೇಗಿರುತ್ತದೆ?: ಕರ್ನಾಟಕದಲ್ಲಿ ಸಂಪ್ರದಾಯಿಕ ಬೆಲ್ಲ ಉತ್ಪಾದನೆಯಲ್ಲಿ ತನ್ನದೇ ಆದ ಸ್ಥಾನವನ್ನ ಗಳಿಸಿಕೊಂಡಿರುವುದು ಮಲೆನಾಡಿನ ಡಬ್ಬಿ ಬೆಲ್ಲ. ಹೆಚ್ಚಾಗಿ ಡಬ್ಬಿಯಲ್ಲಿ ಶೇಖರಿಸಿ ಇಡುವುದರಿಂದ ಇದಕ್ಕೆ ಡಬ್ಬಿ ಬೆಲ್ಲ ಎಂಬ ಹೆಸರು ಬಂದಿದೆ. ಈ ಬೆಲ್ಲ ಹೆಚ್ಚಾಗಿ ಸಾವಯವ ಪದ್ದತಿಯಲ್ಲಿ ತಯಾರಾಗುತ್ತದೆ. ನೋಡಲು ಕಪ್ಪು ಮಿಶ್ರಿತ ಬಣ್ಣದಲ್ಲಿದ್ದು ಹರಳು ಹಾಗೂ ಜೇನಿನಂತೆ ತೆಳುವಾಗಿರುತ್ತದೆ. ಅಚ್ಚಿನ ಬೆಲ್ಲಕ್ಕಿಂತ ಹೆಚ್ಚು ಸಿಹಿಯಾಗಿದ್ದು ಸುಣ್ಣದ ಮಿಶ್ರಣ ಅತ್ಯಲ್ಪ. ಜೊತೆಗೆ ಡಬ್ಬಿ ಬೆಲ್ಲ ನಾಲ್ಕೈದು ವರ್ಷ ಹಾಳಾಗುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಸೇರಿದಂತೆ ವಿದೇಶಗಳಲ್ಲಿಯೂ ಡಬ್ಬಿ ಬೆಲ್ಲಕ್ಕೆ ವಿಶೇಷ ಬೇಡಿಕೆಯಿದೆ.

ಕಳೆದ ಬಾರಿ ಬೆಲ್ಲ ತಯಾರಿಸಿ ಕೈ ಸುಟ್ಟುಕೊಂಡಿದ್ದ ಉತ್ಪಾದಕರು ತಮ್ಮ ಮನೆಗಳಿಗೆ ಬೇಕಾಗುವಷ್ಟು ಮಾತ್ರ ತಯಾರಿಸಿಕೊಂಡಿದ್ದಾರೆ. ಹೀಗಾಗಿ ಮಲೆನಾಡಿನ ಬೆಲ್ಲ ಅಥವಾ ಡಬ್ಬಿ ಬೆಲ್ಲ ಗ್ರಾಹಕರ ಕೈಗೆ ಸುಲಭವಾಗಿ ಸಿಗುತ್ತಿಲ್ಲ. ಆದರೆ ಯಾರೆಲ್ಲ ತಯಾರಿಸಿ ಮಾರಾಟ ಮಾಡುತ್ತಿದ್ದಾರೋ ಅವರೆಲ್ಲರಿಗೆ ಈಗ ಬಂಪರ್ ಲಾಟರಿ ಹೊಡೆದಿದೆ.

 

Advertisement
Advertisement