ನವದೆಹಲಿ: ಅನಾರೋಗ್ಯ ಕಾರಣ ನೀಡಿ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿಗಳಿಗೆ ರಾಜೀನಾಮೆ ಪತ್ರವನ್ನ ರವಾನಿಸಿದ್ದಾರೆ. ಈ ಪತ್ರವನ್ನ ಉಪರಾಷ್ಟ್ರಪತಿ ಎಕ್ಸ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ.
— Vice-President of India (@VPIndia) July 21, 2025
ಸಂವಿಧಾನದ 67(a) ವಿಧಿಯ ಪ್ರಕಾರ ರಾಜೀನಾಮೆ ನೀಡುತ್ತಿರುವುದಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ʻಆರೋಗ್ಯ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ನಾನು ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆʼ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಮುಂದುವರಿದು… ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮಂತ್ರಿ ಮಂಡಲದ ಸದಸ್ಯರು ಹಾಗೂ ಸಂಸದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಯವರ ಸಹಕಾರ ಮತ್ತು ಬೆಂಬಲ ಅಮೂಲ್ಯವಾದುದು. ನಾನು ಅಧಿಕಾರದಲ್ಲಿರುವಾಗ ಬಹಳಷ್ಟು ಕಲಿತಿದ್ದೇನೆ. ನನ್ನ ಕಾರ್ಯಸಾಧನೆಗೆ ಉತ್ತಮ ಸಹಕಾರ ನೀಡಿದ ರಾಷ್ಟ್ರಪತಿಗಳಿಗೂ ಆಳವಾದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಈ ಮಹತ್ವದ ಅವಧಿಯಲ್ಲಿ ಭಾರತದ ಗಮನಾರ್ಹ ಆರ್ಥಿಕ ಪ್ರಗತಿ ಮತ್ತು ಅಭೂತಪೂರ್ವ ಅಭಿವೃದ್ಧಿಯನ್ನು ವೀಕ್ಷಿಸುವ ಮತ್ತು ಇಂತಹ ಬೆಳವಣಿಗೆಯಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ತೃಪ್ತಿ ತಂದಿದೆ. ನಮ್ಮ ರಾಷ್ಟ್ರದ ಇತಿಹಾಸದ ಈ ಪರಿವರ್ತನಾಶೀಲ ಯುಗದಲ್ಲಿ ಸೇವೆ ಸಲ್ಲಿಸುವುದು ನಿಜವಾದ ಗೌರವ ಎಂದೇ ಭಾವಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋಗಿದ್ದರು. ಇಂದು (ಜು.21) ಬೆಳಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.