Connect with us

Dakshina Kannada

ಸಂಕಷ್ಟದಲ್ಲಿರುವ ಶಾಲೆ, ದೇವಸ್ಥಾನಕ್ಕೆ ಜಾಗತಿಕ ಬಂಟರ ಸಂಘ ನೆರವು: ಐಕಳ ಹರೀಶ್ ಶೆಟ್ಟಿ

Published

on

ಮಂಗಳೂರು: ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಶಿಕ್ಷಣ ಸಂಸ್ಥೆಗಳು, ದೇವಸ್ಥಾನಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಈಗಾಗಲೇ ನೆರವು ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲೂ ಅದನ್ನು ಮುಂದುವರಿಸಲಾಗುವುದು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರ ಸಂಘದ ಪ್ರಥಮ ಗ್ರಾಮ ವಾಸ್ತವ್ಯ ನಡೆದ ಕುತ್ಲೂರು ಸರ್ಕಾರಿ ಶಾಲೆಗೆ ಪೀಠೋಪಕರಣ ಹಾಗೂ ಅತಿಥಿ ಉಪನ್ಯಾಸಕರಿಗೆ ಗೌರವಧನ ವಿತರಿಸಲಾಯಿತು. ಆ ಬಳಿಕ ಮಾತನಾಡಿದ ಹರೀಶ್ ಶೆಟ್ಟಿ, ಉತ್ತಮ ಶಿಕ್ಷಣದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಮುಂಬೈ ಉದ್ಯಮಿಗಳು, ದಾನಿಗಳ ಸಹಾಯದಿಂದ ಸಾಮಾಜಿಕ ಸೇವೆಯನ್ನು ಮಾಡುತ್ತಿವೆ ಎಂದು ಭರವಸೆ ನೀಡಿದರು.

ಕಳೆದ ಎರಡು ವರ್ಷಗಳಿಂದ ಸಂಘದಿಂದ ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಕ್ಕೆ ವಿಶೇಷ ನೆರವನ್ನು ನೀಡುತ್ತಾ ಬರಲಾಗಿದೆ. ಸಹಕಾರ ಕೇಳಿ ಬಂದ ಯಾವುದೇ ಮನವಿಯನ್ನು ಈವರೆಗೆ ತಿರಸ್ಕಾರ ಮಾಡಿಲ್ಲ. ಜಾಗತಿಕ ಬಂಟರ ಸಂಘದಿಂದ ಕುತ್ಲೂರು ಶಾಲೆಯ ಪೀಠೋಪಕರಣಕ್ಕೆ ಮತ್ತು ಆ ಶಾಲೆಯ ಅತಿಥಿ ಉಪನ್ಯಾಸಕರಿಗೆ ಗೌರವ ಧನ ಚೆಕ್ ಹಸ್ತಾಂತರ ಮಾಡಲಾಗಿದೆ. ಕುತ್ಲೂರು ಶಾಲೆಯನ್ನು ಸಂಘ ದತ್ತು ತೆಗೆದುಕೊಳ್ಳುವ ಬೇಡಿಕೆ ಬಂದಿದ್ದು, ಸಂಘದ ಸಭೆಯಲ್ಲಿ ಪ್ರಸ್ತಾಪ ಮಾಡಿ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕುತ್ಲೂರು ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಸದಸ್ಯ ರಾಮಚಂದ್ರ ಭಟ್ ಮಾತನಾಡಿ, ಜಾಗತಿಕ ಬಂಟರ ಸಂಘದಿಂದ ಶಾಲೆಗೆ ನೀಡಿದ ಸಹಕಾರ ನಿಜಕ್ಕೂ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ ಶಾಲೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ ಬಳಿಕ ಶಾಲೆಯ ಚಿತ್ರಣವೇ ಬದಲಾಗಿದ್ದು, ಶಾಲೆಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮವಾಸ್ತವ್ಯ, ಬ್ರ್ಯಾಂಡ್ ಮಂಗಳೂರು, ಪತ್ರಕರ್ತರಿಗೆ ಕಾರ್ಯಾಗಾರ, ಪತ್ರಕರ್ತರ ಆರೋಗ್ಯ ಶಿಬಿರದಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಗ್ರಾಮವಾಸ್ತವ್ಯದಲ್ಲಿ ಪತ್ರಕರ್ತರ ಸಂಘ ನೀಡಿದ ಬಹುತೇಕ ಬೇಡಿಕೆಗಳನ್ನು ದಾನಿಗಳು, ಅಧಿಕಾರಿಗಳ ಸಹಕಾದಿಂದ ಈಡೇರಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ದಾನಿಗಳಾದ ಐಕಳ ಹರೀಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಿಕಾ ಭವನ ಟ್ರಸ್ಟ್ ನ ಅಧ್ಯಕ್ಷ ಆನಂದ್ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಕೋಟ್ಯಾನ್ ಪಡು ವಂದಿಸಿದರು.

Click to comment

Leave a Reply

Your email address will not be published. Required fields are marked *