ರಾಬರ್ಟ್ ವಿರುದ್ಧ ಅಖಾಡಕ್ಕಿಳಿಯುತ್ತಾರಾ ಜಗಪತಿ ಬಾಬು?

Public TV
1 Min Read
Darshan Jagapati

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಚಿತ್ರೀಕರಣ ಚಾಲೂ ಆಗಿದೆ. ಆದರೂ ಕೂಡಾ ಈ ಚಿತ್ರದ ತಾರಾಗಣದ ವಿಚಾರ ಮಾತ್ರ ನಿಗೂಢವಾಗಿಯೇ ಉಳಿದುಕೊಂಡಿದೆ. ಆದರೀಗ ರಗಡ್ ವಿಲನ್ ಒಬ್ಬರು ರಾಬರ್ಟ್ ವಿರುದ್ಧ ಅಬ್ಬರಿಸಲು ಆಗಮಿಸುತ್ತಿರೋ ವಿಚಾರವನ್ನು ಖುದ್ದು ನಿರ್ದೇಶಕ ತರುಣ್ ಸುಧೀರ್ ಜಾಹೀರು ಮಾಡಿದ್ದಾರೆ.

ಈ ಬಗ್ಗೆ ತರುಣ್ ಸಾಮಾಜಿಕ ಜಾಲತಾಣಗಳ ಮೂಲಕ ಜಗಪತಿ ಬಾಬು ರಾಬರ್ಟ್ ಚಿತ್ರದಲ್ಲಿ ನಟಿಸಲಿರೋದನ್ನು ಬಹಿರಂಗಗೊಳಿಸಿದ್ದಾರೆ. ತರುಣ್ ಸುಧೀರ್ ಜಗಪತಿ ಬಾಬು ಅವರನ್ನು ರಾಬರ್ಟ್ ಚಿತ್ರತಂಡಕ್ಕೆ ಸ್ವಾಗತಿಸುವ ಮೂಲಕ ಈ ಸುದ್ದಿ ಅಧಿಕೃತಗೊಂಡಂತಾಗಿದೆ.

ಜಗಪತಿ ಬಾಬು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಬಹು ಬೇಡಿಕೆ ಹೊಂದಿರುವ ನಟ. ಇತ್ತೀಚಿನ ದಿನಗಳಲ್ಲಿ ವಿಲನ್ ರೋಲ್‍ಗಳಲ್ಲಿಯೇ ಮಿಂಚುತ್ತಿರೋ ಜಗಪತಿ ಬಾಬು ಪಾಲಿಗೆ ರಾಬರ್ಟ್ ಕನ್ನಡದಲ್ಲಿ ಮೂರನೇ ಚಿತ್ರ. ಅವರು ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರದ ಮೂಲಕವೇ ಕನ್ನಡದಲ್ಲಿ ಮೊದಲ ಸಲ ಕಾಣಿಸಿಕೊಂಡಿದ್ದರು. ಆದರೆ, ರಾಬರ್ಟ್ ಚಿತ್ರದಲ್ಲಿನ ಅವರ ಪಾತ್ರ ಕನ್ನಡಕ್ಕೆ ಮಾತ್ರವಲ್ಲದೇ ಜಗಪತಿ ಬಾಬು ಅಭಿಮಾನಿ ಪಡೆಗೂ ಹೊಸತಾಗಿರಲಿದೆಯಂತೆ.

Jagapati babu

ಜಗಪತಿ ಬಾಬು ಅಡಿಯಿಡುತ್ತಿರೋ ವಿಚಾರವೀಗ ಜಾಹೀರಾಗಿದೆಯಾದರೂ ನಾಯಕಿಯೂ ಸೇರಿದಂತೆ ಉಳಿಕೆ ತಾರಾಗಣದ ವಿವರವನ್ನ ಚಿತ್ರತಂಡ ಗೌಪ್ಯವಾಗಿಟ್ಟಿದೆ. ನಾಯಕಿ ಯಾರಾಗುತ್ತಾರೆಂಬ ಸುತ್ತಲಂತೂ ಥರ ಥರದ ಸುದ್ದಿಗಳು ಹಬ್ಬಿಕೊಂಡಿದ್ದು, ಎಲ್ಲವೂ ಇನ್ನಷ್ಟೇ ಪಕ್ಕಾ ಆಗಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *