ಜಗನ್ನಾಥ ರಥಯಾತ್ರೆ ಆರಂಭ- ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಅಮಿತ್ ಶಾ ದಂಪತಿ

Public TV
2 Min Read
jaganatha ratha yatra

ಅಹಮದಾಬಾದ್: ವಾರ್ಷಿಕ ಜಗನ್ನಾಥ ರಥಯಾತ್ರೆ ಇಂದಿನಿಂದ ಶುಭಾರಂಭಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಪತ್ನಿ ಸೋನಾಲ್ ಶಾ ಅವರು ಅಹಮದಾಬಾದ್‍ನ 450 ವರ್ಷಗಳಷ್ಟು ಪುರಾತನ ಜಗನ್ನಾಥ ದೇವಸ್ಥಾನದಲ್ಲಿ ಮಂಗಳಾರತಿ ಮಾಡಿ ಪ್ರಾರ್ಥನೆ ಸಲ್ಲಿಸಿದರು.

amit shah pooja

ಗುಜರಾತ್‍ನಲ್ಲಿ ನಡೆಯುವ ಈ ಜಗನ್ನಾಥ ರಥಯಾತ್ರೆಯನ್ನು ಒಡಿಶಾದ ಪುರಿಯಲ್ಲಿ ನಡೆಯುವ ರಥಯಾತ್ರೆಗೆ ಹೋಲಿಕೆ ಮಾಡಲಾಗುತ್ತದೆ. ‘ರಥ ಉತ್ಸವ’ ಎಂದೂ ಕರೆಯಲ್ಪಡುವ ರಥಯಾತ್ರೆ, ನಂದಿಗೋಸ (ಭಗವಾನ್ ಜಗನ್ನಾಥ್), ತಲಾಧ್ವಜ (ಭಗವಾನ್ ಬಾಲಭದ್ರ) ಮತ್ತು ದರ್ಪದಾಲನ್ (ದೇವಿ ಸುಭದ್ರಾ) ಎಂಬ ಮೂರು ದೇವತೆಗಳ ವಾರ್ಷಿಕ ಪ್ರಯಾಣ ಎನ್ನಲಾಗುತ್ತದೆ. 12ನೇ ಶತಮಾನದ ಜಗನ್ನಾಥ ದೇವಾಲಯದಿಂದ ದೇವಿ ಗುಂಡಿಚಾ ದೇಗುಲದವರೆಗೆ, ಮೂರು ದೈತ್ಯ ಮರದ ರಥಗಳಲ್ಲಿ ದೇವತೆಗಳ ವಿಗ್ರಹಗಳನ್ನು ಇರಿಸಿ ಭಕ್ತಾದಿಗಳು ರಥವನ್ನು ಎಳೆಯುವುದು ಸಂಪ್ರದಾಯವಾಗಿದೆ.

jaganatha ratha yatra 1

9 ದಿನಗಳ ಕಾಲ ನಡೆಯುವ ಈ ರಥೋತ್ಸವವು ಬಹುದ್ ಯಾತ್ರೆ ಮೂಲಕ ಅಂತ್ಯವಾಗುತ್ತದೆ. ರಥೋತ್ಸವದಲ್ಲಿ ಭಾಗಿಯಾಗುವ ಮೂರು ದೇವತೆಗಳು ದೇವಸ್ಥಾನಕ್ಕೆ ವಾಪಾಸ್ಸಾಗುವುದನ್ನು ಬಹುದ್ ಯಾತ್ರೆ ಎನ್ನಲಾಗುತ್ತದೆ.

amit shah pooja 1

ಒಡಿಶಾದಲ್ಲಿ ನಡೆಯುವ ಜಗನ್ನಾಥ ರಥಯಾತ್ರೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸುಮಾರು ಒಂದು ದಶಲಕ್ಷಕ್ಕೂ ಹೆಚ್ಚು ಮಂದಿ ಹಿಂದೂ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ. ಆದರಂತೆ ಗುಜರಾತ್ ಜಗನ್ನಾಥ ರಥಯಾತ್ರೆಯಲ್ಲಿ ಕೂಡ ಸಾವಿರಾರು ಮಂದಿ ಭಾಗಿಯಾಗುತ್ತಾರೆ. ಹೀಗಾಗಿ ಪುರಿಯಲ್ಲಿ ನಡೆಯುವ ಜಗನ್ನಾಥ ರಥಯಾತ್ರೆಯ ನಂತರದ ಗುಜರಾತ್‍ನ ರಥೋತ್ಸವವೇ ದೊಡ್ಡ ರಥಯಾತ್ರೆ ಎಂಬ ಪ್ರಸಿದ್ಧಿ ಕೂಡ ಗಳಿಸಿದೆ. ರಥೋತ್ಸವದ ಮುಖ್ಯ ಮೂರು ದೇವರುಗಳ ಮೂರು ಭವ್ಯ ರಥಗಳನ್ನು 12 ನೇ ಶತಮಾನದ ದೇವಾಲಯದ ಮುಂದೆ ಶ್ರದ್ಧಾ ಭಕ್ತಿಯಿಂದ ತಯಾರಿಸಲಾಗುತ್ತದೆ. ಭಕ್ತರು 2.5 ಕಿ.ಮೀ ದೂರದವರೆಗೂ ಮೂರು ದೇವತೆಗಳ ರಥಗಳನ್ನು ಎಳೆದು ಪುನೀತರಾಗುತ್ತಾರೆ.

ಅಲ್ಲದೆ ರಥಯಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಯಾತ್ರೆ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ಬಿಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ. ಭಕ್ತರ ಸುರಕ್ಷತೆಗಾಗಿ 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಥಯಾತ್ರೆ ತೆರಳುವ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾ ಇಸ್ಕಾನ್ ರಥಯಾತ್ರೆಯನ್ನು ಗುರುವಾರ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ತೃಣಮೂಲ ಸಂಸದ ನುಸ್ರತ್ ಜಹಾನ್ ಅವರು ಕೂಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

jaganatha ratha yatra 2

Share This Article
Leave a Comment

Leave a Reply

Your email address will not be published. Required fields are marked *