– ಆಂಧ್ರ ವಿಧಾನಸಭೆಯಲ್ಲಿ ಮಸೂದೆ ಪಾಸ್
– ಜಗನ್‍ಗೆ ರಾಖಿ ಕಟ್ಟಿದ ಮಹಿಳಾ ಶಾಸಕಿಯರು
ಅಮರಾವತಿ: ಅತ್ಯಾಚಾರ ಎಸಗಿದ ಕಾಮುಕರಿಗೆ ಕೇವಲ 21 ದಿನಗಳಲ್ಲಿ ತೀರ್ಪು ನೀಡುವ ಹಾಗೂ ಗಲ್ಲು ಶಿಕ್ಷೆ ವಿಧಿಸುವ ಮಹತ್ವದ ಆಂಧ್ರಪ್ರದೇಶ ದಿಶಾ ಮಸೂದೆ ವಿಧಾನಸಭೆಯಲ್ಲಿ ಪಾಸ್ ಆಗಿದೆ.
ಈ ಮಸೂದೆಗೆ ರಾಜ್ಯಪಾಲರು ಅಂಕತ ಬಿದ್ದ ಬಳಿಕ ಕಾನೂನಾಗಿ ರೂಪುಗೊಳ್ಳಲಿದ್ದು, ಅತ್ಯಾಚಾರ ಎಸಗಿರುವುದು ಸಾಬೀತಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆ ಒಳಗೊಂಡಿದೆ. ಇಂತಹ ಪ್ರಕರಣ ಸಂಭವಿಸಿದಾಗ ಕೇವಲ 21 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ಕಲ್ಪಿಸಿದೆ.
Advertisement
ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಸಚಿವ ಸಂಪುಟ ಈ ಮಸೂದೆಗೆ ಬುಧವಾರ ಒಪ್ಪಿಗೆ ನೀಡಿತ್ತು. ಮಹಿಳೆಯರ ಮೇಲೆ ಅತ್ಯಾಚಾರದಂತಹ ಘೋರ ಅಪರಾಧಗಳನ್ನು ಎಸಗುವವರಿಗೆ ಗಲ್ಲು ಅಥವಾ ಕಠಿಣ ಶಿಕ್ಷೆ ವಿಧಿಸುವುದು ಇದರ ಉದ್ದೇಶವಾಗಿದೆ.
Advertisement
Advertisement
ತೆಲಂಗಾಣದ ಸೈಬರಾಬಾದ್‍ನಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಂತರ ಜೀವಂತವಾಗಿ ಸುಡಲಾಗಿತ್ತು. ಪ್ರಕರಣದ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸ್ಥಳ ಪರಿಶೀಲನೆಗಾಗಿ ಆರೋಪಿಗಳನ್ನು ಸ್ಥಳಕ್ಕೆ ಕೊಂಡೊಯ್ದಾಗ ಪೊಲೀಸರ ಮೇಲೆಯೇ ದಾಳಿ ನಡೆಸಿ, ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಆಗ ಪೊಲೀಸರು ಎನ್‍ಕೌಂಟರ್ ಮೂಲಕ ಆರೋಪಿಗಳನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಾಮುಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹೊಸ ಕಾನೂನು ರಚನೆಗೆ ಮುಂದಾಗಿದೆ.
Advertisement
ಇತ್ತೀಚೆಗೆ ಈ ಕುರಿತು ಸದನದಲ್ಲಿ ಮಾತನಾಡಿದ್ದ ಸಿಎಂ ಜಗನ್‍ಮೋಹನ ರೆಡ್ಡಿ, ಅತ್ಯಾಚಾರ ಹಾಗೂ ಆಸಿಡ್ ದಾಳಿಯಂತಹ ಪ್ರಕರಣಗಳು ನಡೆದಾಗ ನಿರ್ಣಾಯಕ ಸಾಕ್ಷ್ಯಾಧಾರಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು 14 ದಿನಗಳಲ್ಲಿ ವಿಚಾರಣೆ ನಡೆಸಿ, 21 ದಿನಗಳಲ್ಲಿ ಶಿಕ್ಷೆ ನೀಡಬೇಕು ಎಂದು ಹೇಳಿದ್ದರು.
ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, 2019ರ ಮಹಿಳಾ ಮತ್ತು ಮಕ್ಕಳ ಕಾಯ್ದೆಯಡಿ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳನ್ನು ತೆರೆಯಲು ಮುಂದಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಗೆ ಅವಮಾನವಾಗುವಂತಹ ಪೋಸ್ಟ್ ಗಳನ್ನು ಹಾಕಿದಲ್ಲಿ ಸೆಕ್ಷನ್ 354(ಇ) ಅಡಿ ಪ್ರಕರಣ ದಾಖಲಾಗುತ್ತದೆ. ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳಿಗೆ 10 ರಿಂದ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ ಪ್ರಕರಣ ತೀವ್ರವಾಗಿದ್ದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಪೊಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಿಗೂ ಜೈಲು ಶಿಕ್ಷೆಯನ್ನು ವಿಸ್ತರಿಸುವ ಕುರಿತು ಆಂಧ್ರ ಪ್ರದೇಶ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಮಸೂದೆ ಪಾಸ್ ಆಗುತ್ತಿದ್ದಂತೆ ವೈಎಸ್‍ಆರ್ ಕಾಂಗ್ರೆಸ್ಸಿನ ಶಾಸಕಿಯರು ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಅವರಿಗೆ ರಾಖಿ ಕಟ್ಟಿ ಸಂಭ್ರಮಕಿಸಿದರು.