ಮೈಸೂರು: ಜಿಲ್ಲೆಗೆ ಬರುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಐತಿಹಾಸಿಕ ಜಗನ್ಮೋಹನ ಅರಮನೆಗೆ ಬೀಗ ಬಿದ್ದಿದೆ. ಅರಮನೆ ದುರಸ್ತಿಯಲ್ಲಿದೆ ಎಂದು ಅರಮನೆಯ ಮುಖ್ಯ ದ್ವಾರಕ್ಕೆ ಫಲಕ ಹಾಕಲಾಗಿದೆ.
ಎರಡು ತಿಂಗಳ ಕಾಲ ಜಗನ್ಮೋಹನ ಅರಮನೆ ನೋಡಿ ಆನಂದಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲವಾಗಿದೆ. ಅದರಲ್ಲೂ ದಸರಾ ವೇಳೆ ಮೈಸೂರಿಗೆ ಬರುವ ಪ್ರವಾಸಿಗರಿಗೆ ಅರಮನೆ ನೋಡುವ ಭಾಗ್ಯ ಸಿಗುವುದಿಲ್ಲ. ಆರ್ಟ್ ಗ್ಯಾಲರಿಯ ಮೇಲ್ಛಾವಣಿಯ ಒಂದು ಭಾಗ ಕುಸಿದ ಕಾರಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಜಗನ್ಮೋಹನ ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.
Advertisement
Advertisement
ಅಂಬಾ ವಿಲಾಸ ಅರಮನೆ ಬೆಂಕಿಗೆ ಆಹುತಿಯಾದಾಗ ಇದೇ ಅರಮನೆಯಲ್ಲಿ ರಾಜ ಮನೆತನದವರು ವಾಸ ಮಾಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪಟ್ಟಾಭಿಷೇಕ ಮಹೋತ್ಸವ ಇದೇ ಅರಮನೆಯಲ್ಲಿ ನಡೆದಿತ್ತು. 1861 ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ನಿರ್ಮಾಣಗೊಂಡ ಅರಮನೆಯಲ್ಲಿ ಅಂದಿನಿಂದಲೂ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಭಾಗದಲ್ಲಿ ವೇದಿಕೆ ಸಭಾಂಗಣ ಮತ್ತೊಂದು ಭಾಗದಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದ ಅರಮನೆಗೆ ಈಗ ಬೀಗ ಬಿದ್ದಿದೆ.
Advertisement
Advertisement
ರಾಜ ಮನೆತನದ ಆಡಳಿತಾವಧಿಯನ್ನು ನೆನಪಿಸುವಂತಹ ಸನ್ನಿವೇಶಗಳು ಜಗನ್ಮೋಹನ ಅರಮನೆಯ ಪ್ರಮುಖ ಆಕರ್ಷಣೆಯಾಗಿತ್ತು. ಶಸ್ತ್ರಾಸ್ತ್ರಗಳು, ತೈಲ ವರ್ಣದ ಚಿತ್ರಗಳು, ಪರಂಪರೆಯನ್ನ ಬಿಂಬಿಸುವ ವಸ್ತುಗಳು, ರಾಜಮಹಾರಾಜರ ಚಿತ್ರಗಳು ಆರ್ಟ್ ಗ್ಯಾಲರಿಯ ವಿಶೇಷವಾಗಿತ್ತು. ಮೈಸೂರಿಗೆ ಬರುವ ಪ್ರವಾಸಿಗರು ಜಗನ್ಮೋಹನ ಅರಮನೆ ವೀಕ್ಷಿಸದೆ ವಾಪಸ್ ಹೋಗುತ್ತಿರಲಿಲ್ಲ. ಇಂತಹ ಪ್ರವಾಸಿ ಕೇಂದ್ರಕ್ಕೆ ದಸರಾ ವೇಳೆ ಬೀಗ ಬಿದ್ದಿರುವುದು ವಿಪರ್ಯಾಸವಾಗಿದೆ.
ಪ್ರವಾಸಿಗರನ್ನೇ ನೆಚ್ಚಿಕೊಂಡಿರುವ ಇಲ್ಲಿನ ವ್ಯಾಪಾರಸ್ಥರ ಹೊಟ್ಟೆಗೂ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜಗನ್ಮೋಹನ ಅರಮನೆ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಿ ದಸರಾ ವೇಳೆಗೆ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv