Tirupati Laddu Row | ಟಿಟಿಡಿ ಲಡ್ಡು ತಯಾರಿಕೆಗೆ ಪ್ರಮಾಣಿಕೃತ ತುಪ್ಪವನ್ನೇ ಬಳಸಲಾಗಿದೆ: ಜಗನ್ ಸ್ಪಷ್ಟನೆ

Public TV
2 Min Read
YS Jagan Mohan Reddy

– ತಿರುಪತಿ ಲಡ್ಡು ವಿಚಾರದಲ್ಲಿ ಟಿಡಿಪಿ ರಾಜಕೀಯ

ಅಮರಾವತಿ: ತಿರುಪತಿ (Tirupathi) ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ತುಪ್ಪದ ಮಾದರಿ ಸಂಗ್ರಹಿಸಿ ಪ್ರಮಾಣಿಕರಿಸಿದ ಬಳಿಕವೇ ತುಪ್ಪದ ಬಳಕೆ ಮಾಡಲಾಗುತ್ತದೆ ಎಂದು ವೈಎಸ್‍ಆರ್‌ಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸ್ಪಷ್ಟನೆ ನೀಡಿದ್ದಾರೆ.

ತಿರುಪತಿ ಲಡ್ಡು ವಿಷಯದಲ್ಲಿ ನಡೆಯುತ್ತಿರುವ ವಿವಾದದ (Tirupati Laddu Row) ವಿಚಾರವಾಗಿ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಪ್ರಸಾದದ ಅರ್ಹತೆಯ ಮಾನದಂಡ ದಶಕಗಳಿಂದ ಬದಲಾಗಿಲ್ಲ. ಪೂರೈಕೆದಾರರು ಎನ್‍ಎಬಿಎಲ್ ಪ್ರಮಾಣಪತ್ರ ಮತ್ತು ಉತ್ಪನ್ನ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಬೇಕು. ಅದಾದ ಬಳಿಕ ಟಿಟಿಡಿ (TTD) ತುಪ್ಪದಿಂದ ಮಾದರಿಗಳನ್ನು ಸಂಗ್ರಹಿಸುತ್ತದೆ. ಬಳಿಕ ಪರಿಶೀಲಿಸಿದ ಉತ್ಪನ್ನಗಳನ್ನು ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Tirupati Laddu Row: ಹೈಕೋರ್ಟ್‌ ಮೊರೆ ಹೋದ ಜಗನ್‌

ದೇವಾಲಯಕ್ಕೆ ಲಡ್ಡು ತಯಾರಿಕೆಗಾಗಿ ಸಾಮಗ್ರಿಗಳನ್ನು ಒದಗಿಸಲು ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಅಗತ್ಯ ದಾಖಲೆಗಳನ್ನು ಹಾಗೂ ಗುಣಮಟ್ಟದ ಪ್ರಮಾಣ ಪತ್ರವನ್ನು ಒದಗಿಸಿ ಟೆಂಡರ್ ಪಡೆಯಬೇಕು. ನಮ್ಮ ಆಡಳಿತದಲ್ಲಿ ನಾವು 18 ಬಾರಿ ಉತ್ಪನ್ನಗಳನ್ನು ತಿರಸ್ಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಅವರು, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಗುಜರಾತ್‍ನ ಸರ್ಕಾರಿ ಲ್ಯಾಬ್‍ನ ವರದಿಯನ್ನು ಅವರು ಉಲ್ಲೇಖಿಸಿದ್ದರು.

ಈ ವಿಚಾರ ಸದ್ದು ಮಾಡುತ್ತಿದ್ದಂತೆ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.

ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಕೂಡ ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ – ವರದಿ ಕೇಳಿದ ಕೇಂದ್ರ ಸರ್ಕಾರ

Share This Article