Connect with us

Latest

ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಚಂದ್ರಬಾಬುಗೆ ಜಗನ್ ಪ್ರಶ್ನೆ

Published

on

ವಿಜಯವಾಡ: ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮವನ್ನಾಗಿ ಪರಿವರ್ತಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದಿದ್ದಾರೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.

ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಗಳನ್ನಾಗಿ ಪರಿವರ್ತಿಸುವ ಕುರಿತು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಚಿಂತನೆ ನಡೆಸಿದ್ದಾರೆ. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ, ರಾಜಕಾರಣಿ ಪವನ್ ಕಲ್ಯಾಣ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ವೇಳೆ ಇದಕ್ಕೆ ತಿರುಗೇಟು ನೀಡಿರುವ ಸಿಎಂ ಜಗನ್, ನಿಮ್ಮ ಮಕ್ಕಳು ಎಲ್ಲಿ ಕಲಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರೇ ನಿಮ್ಮ ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ? ನಾಳೆ ನಿಮ್ಮ ಮೊಮ್ಮಗ ಯಾವ ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಾನೆ ಎಂದು ಪ್ರಶ್ನಿಸಿದ್ದಾರೆ.

ಮಾತ್ರವಲ್ಲದೆ ಸರ್, ವೆಂಕಯ್ಯ ನಾಯ್ಡು ಅವರೇ ನಿಮ್ಮ ಮಗ ಮತ್ತು ಮೊಮ್ಮಕ್ಕಳು ಯಾವ ಮಧ್ಯಮದಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ಕೇಳಿದ್ದಾರೆ. ಅಲ್ಲದೆ ಪವನ್ ಕಲ್ಯಾಣ್ ಅವರಿಗೂ ಇದೇ ರೀತಿಯ ಪ್ರಶ್ನೆ ಕೇಳಿದ್ದು, ನಿಮಗೆ ಮೂವರು ಪತ್ನಿಯರು, ನಾಲ್ಕೈದು ಮಕ್ಕಳಿದ್ದಾರೆ. ಅವರು ಓದುತ್ತಿರುವ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಯಾವುದು ಎಂದು ಕೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಹಲವು ನಾಯಕರು ವಿರೋಧಿಸುತ್ತಿದ್ದಾರೆ. ಆ ಎಲ್ಲ ನಾಯಕರು ತಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂದು ಎದೆ ಮೇಲೆ ಕೈ ಇಟ್ಟುಕೊಂಡು ಹೇಳಲಿ ಎಂದು ಸವಾಲು ಎಸೆದಿದ್ದಾರೆ.

ಇಂದು ನಾವು ಪ್ರಪಂಚದೊಂದಿಗೆ ಸ್ಪರ್ಧಿಸಬೇಕಿದೆ. ಇಂಗ್ಲಿಷ್ ಇಲ್ಲದೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ನಮ್ಮ ಎಲ್ಲ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿರಬೇಕು ಎಂದು ಪ್ರತಿಪಾದಿಸಿದರು.

1ರಿಂದ 6ನೇ ತರಗತಿಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ(2020-21) ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮಾಧ್ಯಮವಾಗಲಿದೆ ಎಂದು ರೆಡ್ಡಿ ಇದೇ ವೇಳೆ ಘೋಷಿಸಿದರು. ಇದಾದ ಒಂದರಿಂದ ನಾಲ್ಕು ವರ್ಷಗಳಲ್ಲಿ 10ನೇ ತರಗತಿ ವರೆಗೆ ಇಂಗ್ಲಿಷ್ ಮಾಧ್ಯಮವನ್ನಾಗಿ ಮಾಡಲಾಗುವುದು. ಎಲ್ಲ ಶಾಲೆಗಳಲ್ಲಿ ತೆಲುಗು ಅಥವಾ ಉರ್ದು ಕಡ್ಡಾಯ ವಿಷಯವಾಗಲಿದೆ ಎಂದರು.

Click to comment

Leave a Reply

Your email address will not be published. Required fields are marked *