ಬೆಂಗಳೂರು: ಎಫ್‍ಎಂಸಿಜಿ(ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಕ್ಲಸ್ಟರ್ ನಿರ್ಮಾಣದ ಕುರಿತು ಮಾಹಿತಿ ಪಡೆಯಲು ಹಾಗೂ ‘ಇನ್ವೆಸ್ಟ್ ಕರ್ನಾಟಕ’ ಹುಬ್ಬಳ್ಳಿ ಸಮಾವೇಶಕ್ಕೆ ಆಗಮಿಸುವಂತೆ ಗುವಾಹಟಿ ಎಫ್‍ಎಂಸಿಜಿ ವಲಯದ ಕೈಗಾರಿಕೋದ್ಯಮಿಗಳನ್ನು ಇಂದು ಆಹ್ವಾನಿಸಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಗುವಾಹಟಿ ಎಫ್‍ಎಂಸಿಜಿ ವಲಯಕ್ಕೆ ಭೇಟಿ ನೀಡಿ, ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದರು. ಫಿಕ್ಕಿಯ ಕರ್ನಾಟಕ ಚಾಪ್ಟರ್ ಹಾಗೂ ‘ಇನ್ವೆಸ್ಟ್ ಕರ್ನಾಟಕ’ ಫೋರಂ ವತಿಯಿಂದ ಏರ್ಪಡಿಸಿದ್ದ ಹೂಡಿಕೆದಾರರು ಮತ್ತು ಉದ್ಯಮಿಗಳ ಸಭೆಯಲ್ಲಿ ಗುವಾಹಟಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಸದಸ್ಯರು ಪಾಲ್ಗೊಂಡಿದ್ದರು.
ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಇದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಹೂಡಿಕೆಗೆ ವಿಫುಲ ಅವಕಾಶವಿದೆ. ಹುಬ್ಬಳ್ಳಿ-ಧಾರವಾಡ ವಲಯದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಸರ್ಕಾರ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ ಎಂದು ಜಗದೀಶ್ ಶೆಟ್ಟರ್ ಕೈಗಾರಿಕೋದ್ಯಮಿಗಳಿಗೆ ಜಗದೀಶ್ ಶೆಟ್ಟರ್ ವಿವರಣೆ ನೀಡಿದರು.
ಇದೇ ವೇಳೆ ಜಗದೀಶ್ ಶೆಟ್ಟರ್ ಅವರು ಗುವಾಹಟಿಯಲ್ಲಿ ಉಜಾಲ ಘಟಕ, ಗೋದ್ರೇಜ್, ಮಾರ್ಗೋ ಸೇರಿದಂತೆ ಇನ್ನಿತರೆ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯನ್ನು ಅವಲೋಕಿಸಿದರು. ಸಚಿವರ ಜೊತೆಯಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂನ ಸಿಓಓ ಶ್ರೀಮತಿ ಸ್ವರೂಪ ಟಿ.ಕೆ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.