ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಕು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್‍ನಲ್ಲಿ ಸ್ಥಾನ ಏನು? ವಿರೋಧ ಪಕ್ಷ ನಾಯಕನಾಗಲು ಡಿಕೆಶಿ, ಪರಮೇಶ್ವರ್, ಸಿದ್ದರಾಮಯ್ಯನವರ ನಡುವೆ ಫೈಟ್ ಇದೆ. ಕಾಂಗ್ರೆಸ್ ಹೈಕಮಾಂಡ್‍ಗೆ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಸಮಯವಿಲ್ಲ. ಇಂತವರು ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
Advertisement
Advertisement
ಯಡಿಯೂರಪ್ಪನವರು ಹೈಕಮಾಂಡಗೆ ಬೇಡವಾದ ಶಿಶು ಎಂದು ಪದೇ ಪದೇ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರ ಹೇಳಿಕೆಯಲ್ಲಿ ಅರ್ಥವಿಲ್ಲ, ಹೀಗಾಗಿ ಅವರ ಹೇಳಿಕೆಗೆ ಮಹತ್ವ ಕೊಡಬೇಕಾದ ಅಗತ್ಯವಿಲ್ಲ. ಅವರಿಗೆ ಬೇರೆ ಏನೂ ವಿಷಯವಿಲ್ಲ, ಸುಮ್ಮನೆ ಟೀಕೆ ಮಾಡಬೇಕೆಂದು ಮಾಡುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಎಂದು ಹೈಕಮಾಂಡ್ ತೀರ್ಮಾನ ಮಾಡಿದೆ, ಅವರು ತಮ್ಮ ಕೆಲಸ ನಡೆಸಿದ್ದಾರೆ ಎಂದರು.
Advertisement
ಸಿದ್ದರಾಮಯ್ಯನವರು ಮಾತನಾಡುವ ರೀತಿ ಅವರ ಸಂಸ್ಕೃತಿಯನ್ನು ತೊರಿಸುತ್ತದೆ. ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ, ಆ ಸರ್ಕಾರವನ್ನು ಕೆಡವಲು ಅವರೇ ಒಂದು ಟೈಮ್ ಬಾಂಬ್ ಫಿಕ್ಸ್ ಮಾಡಿದ್ದರು. ಈಗ ಆ ಬಾಂಬ್ ಸ್ಫೋಟವಾಗಿ ಸರ್ಕಾರ ಮನೆಗೆ ಹೋಗಿದೆ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಇಬ್ಬರೂ ಒಬ್ಬರಿಗೊಬ್ಬರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.
Advertisement
ಇಡಿ ಅಧಿಕಾರಿಗಳು ಡಿಕೆಶಿ ವಿಚಾರಣೆ ನಡೆಸುತ್ತಿರುವ ಕುರಿತು ಬಿಜೆಪಿಯವರ ಮೇಲೆ ಆರೋಪ ಮಾಡಲಾಗುತ್ತಿದೆ. ಯಾವುದೇ ಇಲಾಖೆಯನ್ನು ನಮ್ಮ ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ. ಬಿಜೆಪಿ ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುವುದಿಲ್ಲ. ಇಲಾಖೆಗಳು ತಮ್ಮದೇ ಆದ ಮಾಹಿತಿ ಪ್ರಕಾರ ದಾಳಿ ಮಾಡುತ್ತವೆ, ವಿಚಾರಣೆ ನಡೆಸುತ್ತವೆ. ಕಾನೂನು ರೀತಿಯಲ್ಲಿ ಯಾವ ಕೆಲಸಗಳು ಆಗಬೇಕು ಅವು ನಡೆಯುತ್ತಿವೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಒಳಜಗಳ ಇದೆ. ಹೊರಗಡೆ ಮಾತ್ರ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಡಿಕೆಶಿ ನಿಜವಾಗಿಯೂ ಸರಿ ಇದ್ದರೆ ತನಿಖೆಗೆ ಹೆದರುವ ಅಗತ್ಯವಿಲ್ಲ ಎಂದರು.