ಸಚಿವ ಜಾರ್ಜ್ ರಕ್ಷಿಸಲು ಗಣಪತಿ ಮೊಬೈಲ್ ಮಾಹಿತಿ ಡಿಲೀಟ್: ಜಗದೀಶ್ ಶೆಟ್ಟರ್

Public TV
1 Min Read
HBL SHETTER 1

ಧಾರವಾಡ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಯ ಬಗ್ಗೆ ನಾನು ಈ ಹಿಂದೆ ಅನುಮಾನ ವ್ಯಕ್ತಪಡಿಸಿದ್ದೆ. ಆದರೆ ಉದ್ದೇಶಪೂರ್ವಕವಾಗಿ ಕೆಜೆ ಜಾರ್ಜ್ ಅವರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕೆಲ ಮಹತ್ವದ ಸಾಕ್ಷಿಗಳನ್ನು ಅಳಿಸಿ ಹಾಕಿದ್ದಾರೆ ಎಂದು ವಿಧಾನಸಭೆಯ ವಿಪಕ್ಷನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದಾರೆ. ತಮ್ಮ ಅಧೀನದಲ್ಲಿರುವ ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡು ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಕರಣ ವಿಚಾರಣೆಯಲ್ಲಿ ಇರುವಾಗಲೇ ಅವರ ಮೊಬೈಲ್ ನಲ್ಲಿರುವ ಮಾಹಿತಿಗಳನ್ನ ಡಿಲೀಟ್ ಆಗಿದ್ದು ಹೇಗೆ? ನೇರವಾಗಿ ಜಾರ್ಜ್ ಅವರು ಈ ಕೇಸ್ ನಲ್ಲಿ ಭಾಗಿಯಾಗಿ ಸಾಕ್ಷ್ಯನಾಶ ಮಾಡಿದ್ದಾರೆ. ಹೀಗಾಗಿ ಕೂಡಲೇ ಜಾರ್ಜ್ ಅವರು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಅವರು ನಿಜವಾಗಿ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದರೆ, ಜಾರ್ಜ್ ಅವರ ರಾಜೀನಾಮೆ ಪಡೆದು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇಲ್ಲ ಎನ್ನುವುದಾದರೆ ಕೆಂಪಯ್ಯ ಆಯೋಗದ ವರದಿಯನ್ನು ಬಹಿರಂಗ ಪಡಿಸಲಿ. ಈ ಪ್ರಕರಣದಲ್ಲಿ ನಾನು ಕೂಡಾ ಸಾಕ್ಷಿಯಾಗಿ ಹೇಳಿಕೆ ನೀಡಿರುವೆ. ಆದರೆ ಸಿಐಡಿ, ಎಸಿಬಿ ಅಂಥ ಹಲವಾರು ಸಂಸ್ಥೆಗಳನ್ನು ಸಿಎಂ ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಶೆಟ್ಟರ್ ಕಿಡಿಕಾರಿದರು.

ಈ ಪ್ರಕರಣದಲ್ಲಿ ಎಲ್ಲ ಸಾಕ್ಷಿಗಳು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆದಿಲ್ಲ. ಅವರಿಗೆ ಬೇಕಾದವರ ಸಾಕ್ಷಿಗಳ ವಿಚಾರಣೆ ನಡೆಸಿ ವರದಿ ತಯಾರಿಸಲಾಗಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇರುವುದು ಸತ್ಯ. ಒಂದು ವೇಳೆ ವರದಿಯಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಬಂದಿದರೆ ಬಿಜೆಪಿ ಮುಂದಿನ ಕಾನೂನು ಹೋರಾಟ ಮಾಡಲಾಗುವುದು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *