ಧಾರವಾಡ: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P.Nadda) ಆಗಮಿಸಲಿದ್ದಾರೆ. ಒಂದು ಕಡೆ ಲೋಕಸಭಾ ಚುನಾವಣೆ ಕಾವು ಜೋರಾಗಿದ್ದರೆ, ಇದೇ ಸಮಯದಲ್ಲಿ ಹುಬ್ಬಳ್ಳಿ (Hubballi) ಬಿವಿಬಿ ಕಾಲೇಜ್ ವಿದ್ಯಾರ್ಥಿನಿ ಕೊಲೆ ಕೂಡಾ ನಡೆದಿದೆ. ಹೀಗಾಗಿ ಜೆ.ಪಿ ನಡ್ಡಾ ತಮ್ಮ ಚುನಾವಣಾ ಕಾರ್ಯಕ್ರಮದ ನಡುವೆ ನೇಹಾ ಮನೆಗೆ ಭೇಟಿ ಕೊಡುವ ಸಾಧ್ಯತೆ ಇದೆ.
ಇಂದು ಮಧ್ಯಾಹ್ನ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಜೆ.ಪಿ ನಡ್ಡಾ ನೇರವಾಗಿ ಹುಬ್ಬಳ್ಳಿ ಖಾಸಗಿ ಹೋಟೆಲ್‌ಗೆ ಬರಲಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಗೆ ಧಾರವಾಡ ಲೋಕಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಲಿದ್ದಾರೆ. ನಂತರ ಹುಬ್ಬಳ್ಳಿ ಸಕ್ರಿ ಶಾಲಾ ಮೈದಾನದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ನೇಹಾ, ಫಯಾಜ್ ಫೋಟೋದೊಂದಿಗೆ ಜಸ್ಟಿಸ್ ಫಾರ್ ಲವ್ ಅಂದ ಯುವಕರು!
ಸಮಾವೇಶದ ನಂತರ ಮತ್ತೆ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಲೋಕಸಭಾ ಚುನಾವಣೆ ಬಗ್ಗೆ ಬಿಜೆಪಿ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಚುನಾವಣೆ ಗೆಲುವಿಗೆ ರಣತಂತ್ರ ಹೆಣೆಯಲಿದ್ದಾರೆ.
ಇದೇ ವೇಳೆ ಜೆ.ಪಿ ನಡ್ಡಾ ಅವರು ಹತ್ಯೆಯಾದ ನೇಹಾ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಪಾಗಲ್ ಪ್ರೇಮಿಯಿಂದ ಹತ್ಯೆಯಾದ ನೇಹಾ ಕುಟುಂಬಸ್ಥರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನೇಹಾ ಮನೆಗೆ ಭೇಟಿಗೆ ಸಾಧ್ಯವಾಗದೇ ಇದ್ದರೆ, ನೇಹಾ (Neha Hiremath) ಪೋಷಕರನ್ನ ಖಾಸಗಿ ಹೋಟೆಲ್‌ಗೆ ಕರೆಸಿ ಸಾಂತ್ವನ ಹೇಳುವ ಸಾಧ್ಯತೆ ಇದೆ. ಚುನಾವಣೆ ಮುನ್ನ ನೇಹಾ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ನಾಯಕರು ಜೆ.ಪಿ ನಡ್ಡಾ ಜೊತೆ ಮಾತುಕತೆ ನಡೆಸಿ, ನೇಹಾ ಕುಟುಂಬಸ್ಥರನ್ನು ಭೇಟಿ ಮಾಡಿಸುವ ಸಾಧ್ಯತೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪ್ರಕರಣ ದಿಕ್ಕು ತಪ್ಪಿಸುತ್ತಿದ್ದಾರೆ, ಸಿಎಂಗೆ ಪತ್ರ ಬರೆದು ನಾವೂ ಆತ್ಮಹತ್ಯೆ ಮಾಡಿಕೊಳ್ತೇವೆ: ನೇಹಾ ತಂದೆ ಭಾವುಕ