ಬೆಂಗಳೂರು: ತಮಿಳು ನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಜೀವನಾಧಾರಿತ ಚಿತ್ರ ಮಾಡುತ್ತಿರುವುದು ತಿಳಿದೇ ಇದೆ. ಅಲ್ಲದೆ ಅವರ ಬಯೋಪಿಕ್ ‘ತಲೈವಿ’ ಚಿತ್ರ ಘೋಷಣೆಯಾದಾಗಿನಿಂದ ಭಾರೀ ಚರ್ಚೆ ನಡೆಯುತ್ತಿದೆ. ಆರಂಭದಲ್ಲಿ ಜಯಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ನಡೆದರೆ. ನಂತರ ಚಿತ್ರ ಯಾವ ರೀತಿ ಇರುತ್ತೆ, ಪಾತ್ರವಾರ್ಗದಲ್ಲಿ ಯಾರಿರುತ್ತಾರೆ ಎಂಬೆಲ್ಲದರ ಕುರಿತು ತುಂಬಾ ಕುತೂಹಲ ಮೂಡಿತ್ತು. ಇದೀಗ ಚಿತ್ರ ತಂಡ ಮತ್ತೊಂದು ಫೋಟೊ ಬಿಡುಗಡೆ ಮಾಡಿದ್ದು, ಕ್ಯೂರಿಯಾಸಿಟಿ ಇನ್ನೂ ಹೆಚ್ಚಾಗಿದೆ.
ಫೆಬ್ರವರಿ 24ರಂದು ಜಯಲಲಿತಾ ಜನ್ಮದಿನವಾಗಿದ್ದು, ಹೀಗಾಗಿ ‘ತಲೈವಿ’ ಚಿತ್ರತಂಡ ಅವರು ರಾಜಕೀಯ ಪ್ರವೇಶಿಸಿದ ಸಂದರ್ಭದ ಫೋಟೋ ರೀತಿಯಲ್ಲೇ ಕಂಗನಾ ಕಾಣಿಸಿಕೊಂಡಿರುವ ಫೋಟೋ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಕಂಗನಾ ಸಹೋದರಿ ರಂಗೊಲಿ ಚಾಂಡೆಲ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಜಯಾ ಅಭಿಮಾನಿಗಳಲ್ಲಿನ ಕುತೂಹಲವನ್ನು ಇನ್ನೂ ಹೆಚ್ಚಿಸಿದೆ. ಜಯಲಲಿತಾ ಅವರು ಹರೆಯ ವಯಸ್ಸಿನಲ್ಲಿ ಯಾವ ರೀತಿ ಇದ್ದರೋ ಅದೇ ರೀತಿ ಕಂಗನಾ ರಣಾವತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ಜಯಾ ಅವರ ಹಳೆ ಫೋಟೋದಲ್ಲಿರುವಂತೆ ಕಪ್ಪು ಕೆಂಪು ಅಂಚಿನ ಬಿಳಿ ಸೀರೆ ಉಟ್ಟಿರುವ ಕಂಗನಾ, ತಲೆಗೂದಲನ್ನೂ ಅದೇ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ ಹಣೆಯ ಮೇಲೆ ಅಗಲವಾಗಿ ಕುಂಕುಮ ಹಚ್ಚಿಕೊಂಡು, ಅವರಂತೆಯೇ ಅಡಿಯಲ್ಲಿ ಕೆಂಪು ಅಡ್ಡಗೆರೆಯನ್ನೂ ಇಟ್ಟುಕೊಂಡಿದ್ದಾರೆ. ಜೊತೆಗೆ ಕಿವಿಯೋಲೆಯನ್ನೂ ಅದೇ ರೀತಿ ಧರಿಸಿದ್ದಾರೆ. ಅವರ ಹಳೆಯ ಫೋಟೋದಲ್ಲಿರುವಂತೆ ಕೆಳತುಟಿಯನ್ನು ಎಡಕ್ಕೆ ಓರೆಯಾಗಿಸಿ ಡಿಟ್ ಟೂ ಜಯಲಲಿತಾ ಅವರಂತೆಯೇ ಪೋಸ್ ಕೊಟ್ಟಿದ್ದಾರೆ. ಅವರ ಸ್ಮೈಲ್‍ನ್ನು ಸಹ ಅದೇ ರೀತಿ ನಿರ್ವಹಿಸಿದ್ದಾರೆ.
Advertisement
ರಂಗೊಲಿಯವರು ತಮ್ಮ ಪೋಸ್ಟ್‍ನಲ್ಲಿ ಈ ಕುರಿತು ಬರೆದುಕೊಂಡಿದ್ದು, ಯಾವುದೇ ಎಫೆಕ್ಟ್ಸ್ ಇಲ್ಲದಿದ್ದರೂ ಜಯಾ ಅಮ್ಮನಂತೆ ಕಾಣುತ್ತಿದ್ದಾರೆ. ಆಘಾತಕಾರಿ, ದೃಢನಿರ್ಧಾರದಿಂದ ಎಲ್ಲವೂ ಸಾಧ್ಯ ಎಂದು ಹ್ಯಾಶ್ ಟ್ಯಾಗ್ ಮೂಲಕ ತಲೈವಿ ಎಂದು ಬರೆದುಕೊಂಡಿದ್ದಾರೆ.
Advertisement
https://twitter.com/Rangoli_A/status/1231755826269868032
ಸುಮಾರು 30ರ ಹರೆಯದ ಜಯಲಲಿತಾರ ಪಾತ್ರದಲ್ಲಿ ಕಂಗನಾ ಕಾಣಿಸಿಕೊಂಡಿದ್ದು, ಜಯಲಲಿತಾ ರಾಜಕೀಯ ಪ್ರವೇಶಿಸಿದ ಅವಧಿಯನ್ನು ಕಟ್ಟಿಕೊಡಲಿದ್ದಾರೆ. ನಟಿ, ಖ್ಯಾತ ನರ್ತಕಿಯೂ ಆಗಿದ್ದ ಜಯಲಲಿತಾರ ಸಿನಿಮಾ, ರಾಜಕೀಯ, ನೃತ್ಯ ಸೇರಿದಂತೆ ಅವರ ವೈವಿಧ್ಯಮಯ ಬದುಕನ್ನು ‘ತಲೈವಿ’ ಸಿನಿಮಾ ಕಟ್ಟಿಕೊಡಲಿದೆ. ಈ ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದು, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಅಲ್ಲದೆ ಕೇವಲ ಫೋಟೋಗೆ ಪೋಸ್ ಕೊಟ್ಟಿದ್ದಲ್ಲ, ಈ ಚಿತ್ರಕ್ಕಾಗಿ ಕಂಗನಾ ರಣಾವತ್ ಹಾರ್ಡ್ ವರ್ಕ್ ಕೂಡ ಮಾಡಿದ್ದಾರೆ. ತಮಿಳು ಕಲಿತಿದ್ದಾರೆ, ಮಾತ್ರವಲ್ಲದೆ ಭರತನಾಟ್ಯ ತರಗತಿಗೂ ಸೇರಿ, ನೃತ್ಯ ಕಲಿತಿದ್ದಾರೆ. ಅಲ್ಲದೆ ಜಯಲಲಿತಾರಂತೆ ಕಾಣಿಸಲು ಗಂಟೆಗಟ್ಟಲೆ ಮೇಕಪ್ ಸೆಷನ್‍ಗಳಲ್ಲಿ ಪಾಲ್ಗೊಂಡಿದ್ದಾರಂತೆ. ಬಾಹುಬಲಿ ಹಾಗೂ ಮಣಿಕರ್ಣಿಕಾ ಸಿನಿಮಾಗಳಿಗೆ ಕಥೆ ಬರೆದಿರುವ ವಿಜಯೇಂದರ್ ಪ್ರಸಾದ್, ತಲೈವಿಗೂ ಕಥೆ ಬರೆದಿದ್ದಾರೆ. ವಿಷ್ಣುವರ್ದನ್ ಇಂದೂರಿ ಮತ್ತು ಶೈಲೇಶ್ ಸಿಂಗ್ ತಲೈವಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.